ಬಂಧನ ಖಂಡಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

7
Published on

ಮೈಸೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಬಂಧನ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯ ಮುಂಭಾಗ ಇರುವ ಗಾಂಧಿಪುತ್ಥಳಿ ಮುಂದೆ ಕೈ, ಹಣೆಗೆ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ರೈತರ ಬಂಧನ ಖಂಡನಾರ್ಹ ಎಂದು ಟೀಕಿಸಿದರು.
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ 5 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿತ್ತು. ರೈತರ ನ್ಯಾಯಯುತ ಬೇಡಿಕೆ ಈಡೇರಿಸುವ ಬದಲು, ಪೊಲೀಸರ ಮೂಲಕ ಸರ್ಕಾರ ಹೋರಾಟವನ್ನು ಹತ್ತಿಕ್ಕಿ ಮುಖಂಡರನ್ನು ಬಂಧಿಸಿದೆ. ಪೊಲೀಸ್ ಬಲ ಬಳಸಿ ಧರಣಿ ನಿರತರನ್ನು ಬಂಧಿಸುವ ಮೂಲಕ ರಾಜ್ಯದ ರೈತಾಪಿ ವರ್ಗಕ್ಕೆ ಅಪಮಾನ ಮಾಡಿದೆ ಎಂದು ಎಂದು ಕಿಡಿಕಾರಿದರು.
ಸರ್ಕಾರ ಪ್ರತಿ ಟನ್ ಕಬ್ಬಿಗೆ 3050 ಎಫ್‌ಆರ್‌ಪಿ ನಿಗದಿ ಮಾಡಿದೆ. ಇದು ಅವೈಜ್ಞಾನಿಕವಾಗಿದ್ದು, ನ್ಯಾಯಯುತ ಬೆಲೆ ನೀಡಬೇಕು. ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಪ್ರತಿ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ ಉಳಿದ ಜಿಲ್ಲೆಯ ಭತ್ತದ ಬೆಳೆಗಾರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಎಂದು ಟೀಕಿಸಿದರು.
ಮುಖಂಡರಾದ ಲಕ್ಷ್ಮೀಪುರ ವೆಂಕಟೇಶ್, ಕಾಟೂರು ಮಹದೇವಸ್ವಾಮಿ, ವರಕೋಡು ನಾಗೇಶ್, ಜಯರಾಮ್, ಬಸವರಾಜ್ ಸಾತಗಳ್ಳಿ, ರಾಜೇಶ್ ಹಂಪಾಪುರ, ದೇವಮಣಿ, ವಾಜಮಂಗಲ ಮಹದೇವು, ಜಯರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net