ಬಂದ್‌ಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲ

Published on

ಮೈಸೂರು: ವಿದ್ಯುತ್ ದರ ಏರಿಕೆ ಖಂಡಿಸಿ ಜೂ.22ರಂದು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಕರೆ ನೀಡಿರುವ ಒಂದು ದಿನದ ಬಂದ್‌ಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬೆಂಬಲ ಸೂಚಿಸಿದೆ ಎಂದು ಒಕ್ಕೂಟದ ಮೈಸೂರು ಶಾಖೆ ಅಧ್ಯಕ್ಷ ಕೆ.ಬಿ.ಲಿಂಗರಾಜು ತಿಳಿಸಿದ್ದಾರೆ.
ಅವೈಜ್ಞಾನಿಕ ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೋದ್ಯಮಿಗಳು ಹಾಗೂ ವರ್ತಕರಿಗೆ ತೊಂದರೆಯಾಗಿದೆ. ಹಾಗಾಗಿ ಒಂದು ದಿನದ ಬಂದ್‌ಗೆ ಮೈಸೂರು ಕೈಗಾರಿಕೋದ್ಯಮಿಗಳು, ವರ್ತಕರು ಬೆಂಬಲ ನೀಡುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ವಿದ್ಯುತ್ ದರ ಇಳಿಸಬೇಕು, ಇಂಧನ ಹೊಂದಾಣಿಕೆ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಶೇ. 40 ರಿಂದ 80 ರಷ್ಟು ಹೆಚ್ಚಾದ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ ಎಂದರು.
ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದರೂ ನಿರ್ಲಕ್ಷಿಸಿರುವುದನ್ನು ಖಂಡಿಸಿ ಹಾಗೂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿವಾರ್ಯವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ಬಂದ್‌ಗೆ ಕರೆ ನೀಡಲಾಗಿದೆ. ಜತೆಗೆ, ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದೆಂಬ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು, ವಿವಿಧ ಕೈಗಾರಿಕಾ ಸಂಘ ಸಂಸ್ಥೆಗಳು ಬಂದ್ ಕರೆಗೆ ಬೆಂಬಲ ಸೂಚಿಸಿವೆ ಎಂದರು. ಕೆಲವರು ಬೆಂಬಲ ಇಲ್ಲ ಎಂದು ಹೇಳಿದರೂ, ವಿದ್ಯುತ್ ಏರಿಕೆ ಬಿಸಿ ಅವರನ್ನೂ ತಟ್ಟಿದೆ ಎನ್ನುವುದನ್ನು ಮರೆಯಬಾರದು ಎಂದರು. ಸಂಘದ ಪ್ರಮುಖರಾದ ರಾಮಕೃಷ್ಣೇಗೌಡ, ಮಂಜುನಾಥ್, ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net