

ಚಾಮರಾಜನಗರ: ಚಾಮರಾಜನಗರ ಬಂದ್ ವೇಳೆ ಅಂಗಡಿ ಮಾಲೀಕರೊಬ್ಬರಿಗೆ ಹೋರಾಟಗಾರರು ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಹಲ್ಲೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹಿಂದುಪರ ಸಂಘಟನೆಯ ಮುಖಂಡ ವಿರಾಟ್ ಶಿವು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಅ.18 ರಂದು ಕರೆನೀಡಿದ್ದ ಸ್ವಯಂ ಪ್ರೇರಿತ ಚಾಮರಾಜನಗರ ಬಂದ್ ವೇಳೆ ಶ್ರೀಭುವನೇಶ್ವರಿ ವೃತ್ತದ ಸಮೀಪದಲ್ಲಿರುವ ಅಂಗಡಿಯೊಂದರ ಮಾಲೀಕರ ಮೇಲೆ ಬಾಗಿಲು ಬಂದ್ ಮಾಡುವಂತೆ ಕೆಲವರು ಹಲ್ಲೆ ಮಾಡಿದ್ದಾರೆ. ಇದು ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಹೋರಾಟಗಾರರ ಹೆಸರಿನಲ್ಲಿ ಅಮಾಯಕನ ಮೇಲೆ ಹಲ್ಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಲ್ಲೆ ಮಾಡಿದವರ ಮೇಲೆ ಸೂಮೋಟೋ ಕೇಸ್ ದಾಖಲು ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವವರು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಂದ್ ದಿನವೇ ಆರ್‌ಎಸ್‌ಎಸ್ ಪಥ ಸಂಚಲನಕ್ಕಾಗಿ ಅಳವಡಿಸಿದ್ದ ಕೇಸರಿ ಧ್ವಜಗಳನ್ನು ತೆರವುಗೊಳಿಸಿದ್ದಾರೆ. ಪಥಸಂಚಲನ ಗುರಿಯಾಗಿಸಿಕೊಂಡು ಇಂತಹ ದೌರ್ಜನ್ಯಗಳು ನಡೆಯುತ್ತಿದ್ದರೂ, ಪೊಲೀಸರು ಕಣ್ಮುಚ್ಚಿಕೊಂಡು ಕುಳಿತಿದ್ದರು. ಪ್ರತಿಭಟನೆಯ ವೇಳೆ ಪಿಎ್ಐ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ೋಷಣೆಗಳನ್ನು ಕೂಗಿದ್ದಾರೆ. ಕೆಲವರು ನೀಲಿ ಶಾಲುಗಳನ್ನು ಹಾಕಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿಗೆ ಮಣ್ಣೆರಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಚಂದ್ರಶೇಖರ್, ಕುಮಾರ್, ಮಹೇಶ್, ಪೃಥ್ವಿ, ಮಣಿ, ಕಿರಣ್ ಹಾಜರಿದ್ದರು.
ಹಲ್ಲೆಯಲ್ಲಿ ಕಾಂಗ್ರೆಸ್ ಕೈವಾಡ:
ಅಂಗಡಿ ಮಾಲೀಕರೊಬ್ಬರಿಗೆ ಹೋರಾಟಗಾರರು ಹಲ್ಲೆ ಮಾಡಿರುವುದರಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಶಿವು ವಿರಾಟ್ ದೂರಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದುಗಳನ್ನು ಗುರಿಯಾಗಿಸಿಕೊಂಡು ಅಮಾಯಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಚಾಮರಾಜನಗರ ಬಂದ್ ಹೋರಾಟದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಎ.ಆರ್.ಕೃಷ್ಣಮೂರ್ತಿ ಭಾಗಿಯಾಗಿದ್ದರು. ಅಂಗಡಿ ಮಾಲೀಕರ ಮೇಲೆ ಹಲ್ಲೆ ಮಾಡಿರುವುದರಲ್ಲಿ ಶಾಸಕರ ಕೈವಾಡವೂ ಇರಬಹುದು. ಹಾಗಾಗಿ ಅಂಗಡಿ ಮಾಲೀಕರು ದೂರು ನೀಡಲು ಮುಂದಾದರೂ ಪೊಲೀಸರು ದೂರು ಸ್ವೀಕಾರ ಮಾಡುತ್ತಿಲ್ಲ. ಜನಪ್ರತಿನಿಧಿಯಾಗಿದ್ದವರು ಈ ರೀತಿಯ ಗೂಂಡಾ ವರ್ತನೆ ತೋರಿರುವುದು ಅತ್ಯಂತ ಖಂಡನೀಯ ಎಂದರು.