

ಬೆಂಗಳೂರು ಗ್ರಾಮಾಂತರ: ಕೃಷಿ ಕಾಯ್ದೆ ತಿದ್ದಪಡಿ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರೆ ನೀಡಿದ್ದ ಭಾರತ್ ಬಂದ್‌ಗೆ ಸೋಮವಾರ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳಿಂದ ನೈತಿಕ ಬೆಂಬಲ ವ್ಯಕ್ತವಾಯಿತು. ವಿವಿಧ ರೈತಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಬೈಕ್ ರ‌್ಯಾಲಿ, ಕಾಲ್ನಡಿಗೆ ಜಾಥಾ ಮೂಲಕ ಕೇಂದ್ರದ ರೈತ ವಿರೋಧಿ ನೀತಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಅಹಿತಕರ ಘಟನೆಗೆ ಆಸ್ಪದವಾಗಲಿಲ್ಲ. ಜಿಲ್ಲೆಯಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆಟೋ ಬಸ್ ಮತ್ತಿತರ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು.
ದೊಡ್ಡಬಳ್ಳಾಪುರದಲ್ಲಿ ಬೈಕ್ ರ‌್ಯಾಲಿ: ದೊಡ್ಡಬಳ್ಳಾಪುರ ತಾಲೂಕಿನ ರಾಜ್ಯ ರೈತ ಸಂಘ, ಕಾಂಗ್ರೆಸ್ ಸಮಿತಿ, ಕನ್ನಡ ಪಕ್ಷ, ಜೆಡಿಎಸ್, ಸಿಪಿಐಎಂ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಬೈಕ್ ರ‌್ಯಾಲಿ ಮೂಲಕ ಕೇಂದ್ರ ಸರ್ಕಾರದ ಕೃಷಿ ನೀತಿಗೆ ವಿರೋಧ ವ್ಯಕ್ತಪಡಿಸಿದವು. ಕೆಲವೆಡೆ ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಪ್ರಸಂಗ ನಡೆಯಿತಾದರೂ ಪೊಲೀಸರ ಮಧ್ಯೆ ಪ್ರವೇಶದಿಂದ ಇದಕ್ಕೆ ಅವಕಾಶವಾಗಲಿಲ್ಲ. ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದವು.
ಮೋದಿ ವಿರುದ್ಧ ಶಾಸಕರ ಕಿಡಿ: ಕೃಷಿ ಮಸೂದೆಗಳನ್ನು ವಿರೋಧಿಸಿ ದೇಹಲಿಯಲ್ಲಿ ನಿರಂತರ ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನಿ ಕಿವಿಕೊಡುತ್ತಿಲ್ಲ, ಮುಂದಿನ ಅವಧಿಯಲ್ಲಿ ದೇಶವನ್ನು ಬಿಜೆಪಿಯಿಂದ ಕಾಪಾಡಬೇಕಿದೆ, ಇಲ್ಲವಾದರೆ ಜನ ಜೀವನ ನಡೆಸಲು ದೊಡ್ಡದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕ ವೆಂಕಟರಮಣಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನೆಲಮಂಗಲದಲ್ಲಿ ಉಗ್ರ ಹೋರಾಟದ ಎಚ್ಚರಿಕೆ: ದೇಶದ ಬಹುಸಂಖ್ಯಾತ ರೈತರ ಹಿತ ಕಾಪಾಡಬೇಕಾದ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಕಾರ್ಪೋರೇಟ್ ಪರವಾದ ನಿಲುವು ತೆಗೆದುಕೊಳ್ಳುತ್ತಿರುವ ಕೇಂದ್ರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ನಾಗರಾಜು ಆರೋಪಿಸಿದರು. ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರ ಪರವಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಕೃಷಿ ಕಾಯ್ದೆ ಹಿಂಪಡೆಯಬೇಕು. ಇಲ್ಲವಾದರೆ ಮಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸಕೋಟೆಯಲ್ಲಿ ಪ್ರತಿಭಟನಾ ಮೆರವಣಿಗೆ: ನಗರದ ಪ್ರಮುಖ ರಸ್ತೆಗಳಲ್ಲಿ ತಾಲೂಕು ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ, ಅಂಗನವಾಡಿ ಕಾರ್ಯಕರ್ತೆಯರು, ಹಸಿರು ಸೇನೆ, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಸಿಐಟಿಯು ಹಾಗೂ ದಲಿತಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.
ಆನೇಕಲ್‌ನಲ್ಲಿ ಬಂಧನ, ಬಿಡುಗಡೆ: ಅತ್ತಿಬೆಲೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು. ಹೋರಾಟಗಾರರಾದ ವಾಟಾಳ್ ನಾಗರಾಜು, ಸಾ.ರಾ.ಗೋವಿಂದ್, ಮಂಜುನಾಥದೇವ, ಆರ್.ಪುನೀತ್, ಲೋಕೇಶ್‌ಗೌಡ ಸೇರಿ ಹಲವರನ್ನು ಬಸ್‌ಗಳಲ್ಲಿ ಕೆಲವು ತಾಸು ಬಂಧನದಲ್ಲಿ ಇರಿಸಲಾಗಿತ್ತು.
ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ ಹಿಂಪಡೆಯಬೇಕು ಎಂದು ಎಲ್ಲ ಸಂಘಟನೆಗಳ ಪರವಾಗಿ ಒತ್ತಾಯ ಮಾಡುತ್ತಿದ್ದೇನೆ ಎಂದು ಕನ್ನಡ ಪರಹೋರಾಟಗಾರ ಸಾ.ರಾ.ಗೋವಿಂದ್ ಒತ್ತಾಯಿಸಿದರು. ಕೃಷಿ ಕಾಯ್ದೆ ತರುವುದರ ಮೂಲಕ ರೈತರಿಗೆ ಮರಣ ಶಾಸನ ಬರೆದಿದ್ದಾರೆ, ರೈತರಿಗಾಗಿ ವರ್ಷಗಟ್ಟೆಲೆ ಜೈಲಿಗೆ ಹೋಗಲೂ ಸಿದ್ಧನಿದ್ದೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ದೇವನಹಳ್ಳಿಯಲ್ಲಿ ಧರಣಿ: ತಾಲೂಕು ಕಚೇರಿ ಎದುರು ರೈತಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ೋಷಣೆ ಕೂಗಿದವು. ತಾಲೂಕಿನ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೋಟೆಲ್, ಅಂಗಡಿಮುಂಗಟ್ಟು ಎಂದಿನಂತೆ ಕಾರ್ಯನಿರ್ವಹಿಸಿದವು.
ವಿಜಯಪುರದಲ್ಲಿ ಮಾನವ ಸರಪಳಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವಿಜಯಪುರ ಹೋಬಳಿ ಘಟಕದ ಅಧ್ಯಕ್ಷ ಮಂಡಿಬೆಲೆ ನಾರಾಯಣಸ್ವಾಮಿ ನೇತೃತ್ವದಲ್ಲಿ ರೈತ ಸಂಘ, ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳೊಂದಿಗೆ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.