ಬಂದೇಬಿಟ್ಟ ಪ್ರಥಮ ಪೂಜಿತ

h30-Market 1
Published on

ಹುಬ್ಬಳ್ಳಿ : ಪ್ರಥಮ ಪೂಜಿತ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಉಳಿದಿರುವುದು ಕ್ಷಣಗಣನೆಗಳಷ್ಟೇ. ಗಣೇಶೋತ್ಸವ ಆಚರಣೆಗೆ ಎಲ್ಲೆಡೆ ಸಡಗರ, ಸಂಭ್ರಮದ ವಾತಾವರಣ ತಲೆದೋರಿದೆ.
ಮೊದಲಿನಿಂದಲೂ ಗಣೇಶೋತ್ಸವ ಎಂದರೆ ಎಲ್ಲಿಲ್ಲದ ಹುರುಪು. ಆದರೆ, ಕಳೆದ ಎರಡು ವರ್ಷ ತಲೆದೋರಿದ್ದ ಕೋವಿಡ್‌ನಿಂದಾಗಿ ಈ ಸಡಗರಕ್ಕೆ ಬ್ರೆಕ್ ಬಿದ್ದಿತ್ತು. ಇದೀಗ, ಕೋವಿಡ್ ಸೋಂಕು ಮೊದಲಿನಂತೆ ಇಲ್ಲ. ಹೀಗಾಗಿ, ಈ ಮೊದಲಿನ ವರ್ಷಗಳಂತೆ ಹಬ್ಬದ ಸೊಬಗು ಮತ್ತೆ ಕಳೆಗಟ್ಟಿದೆ.
ಗಣೇಶ ಚತುರ್ಥಿಯ ಮುನ್ನಾದಿನವಾದ ಮಂಗಳವಾರದಂದು ಎಲ್ಲೆಡೆ ತಳಿರು, ತೋರಣ, ಹೂವು, ಹಣ್ಣುಗಳ ಖರೀದಿ ಜೋರಾಗಿತ್ತು. ಬೆಳಗ್ಗೆ ಮಳೆ ಸುರಿದಿದ್ದರಿಂದ ಮಾರುಕಟ್ಟೆಗೆ ಬಾರದ ಜನರು, ಮಧ್ಯಾಹ್ನದ ನಂತರ ಮೋಡ ಸರಿದು ಬಿಸಿಲು ಕಾಣಿಸಿಕೊಳ್ಳುತ್ತಿದ್ದಂತೆಯೇ ಕುಟುಂಬ ಸಮೇತರಾಗಿ ಮಾರುಕಟ್ಟೆಯತ್ತ ದೌಡಾಯಿಸಿದರು.
ಗಜಾನನ ಪ್ರೀಯರು ಮನೆಗಳನ್ನು ಸುಣ್ಣ, ಬಣ್ಣಗಳಿಂದ ಅಂದಗೊಳಿಸಿದ್ದಾರೆ. ಮನೆಗಳಲ್ಲಿ ಗಣೇಶ ಮೂರ್ತಿ ಮಂಟಪದ ಶೃಂಗಾರಕ್ಕಾಗಿ ಹಲವಾರು ವೈವಿಧ್ಯಮಯ ಅಲಂಕೃತ ವಸ್ತುಗಳನ್ನು ಖರೀದಿಸಿದರು. ಸೇಬು, ಬಾಳೆಹಣ್ಣು, ಕಿತ್ತಲೆ, ಪೇರಲ, ದಾಳಿಂಬರಿ, ಸೇರಿ ವಿವಿಧ ಹಣ್ಣುಗಳು, ಸೇವಂತಿಗೆ, ಮಲ್ಲಿಗೆ, ಗುಲಾಬಿ ಸೇರಿ ತರಹೇವಾರಿ ಹೂವುಗಳನ್ನು ಖರೀದಿಸಿದರು. ಝಗಮಗಿಸುವ ಲೈಟುಗಳ ಸರಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net