

ಕಾರವಾರ: ಭೂ ಕುಸಿತದ ಕಾರಣ ಕೆಲ ದಿನಹಳಿಂದ ಬಂದಾಗಿದ್ದ ಹೊನ್ನಾವರ- ಜೋಗ- ಮಾವಿನಗುಂಡಿ-ಸಾಗರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಲಘು ವಾಹನ ಸಂಚಾರ ಪುನರಾರಂಭಗೊಂಡಿದೆ.
ಮುಂದಿನ ಆದೇಶದವರೆಗೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಹೊನ್ನಾವರ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ಕ್ರಾಸ್ ಬಳಿ ಹೆದ್ದಾರಿ ಕುಸಿದಿತ್ತು. ಇದರಿಂದ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಿ ಡಿಸಿ ಆದೇಶ ಮಾಡಿದ್ದರು. ಮಾವಿನಗುಂಡಿ, ಜೋಗ, ಮಾರ್ಗ ಇದಾಗಿದ್ದರಿಂದ ಜೋಗ ಜಲಪಾತ ನೋಡಿ, ಜಿಲ್ಲೆಯ ಮುರ್ಡೇಶ್ವರ, ಗೋಕರ್ಣ ಮುಂತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರಿಗೆ ಸಮಸ್ಯೆ ಉಂಟಾಗಿತ್ತು.
ಈಗ ಮಳೆ ಕಡಿಮೆಯಾಗಿದೆ. ತಾತ್ಕಾಲಿಕ ದುರಸ್ತಿ ಕಾರ್ಯವನ್ನೂ ಕೈಗೊಂಡಿರುವುದರಿಂದ ಓಡಾಟ ನಡೆಸಬಹುದು ಎಂದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವರದಿ ನೀಡಿದೆ. ಭಟ್ಕಳ ಎಸಿ ಅವರು ನೀಡಿದ ವರದಿಯನ್ನು ಆಧರಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಡಿಸಿ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.