

ವಿಜಯಪುರ: ಬಂಥನಾಳ ಶಿವಯೋಗಿಗಳು ಜಿಲ್ಲೆಗೆ ಶೈಕ್ಷಣಿಕ ಗಂಗೆ ಹರಿಸಿದ ಮಹಾನ್ ಚೇತನ. ಅವರ ದೂರದೃಷ್ಟಿಯ ಫಲವಾಗಿ ವಿಜಯಪುರ ಇಂದು ಶಿಕ್ಷಣ ರಂಗದಲ್ಲಿ ದೊಡ್ಡ ಹೆಸರು ಮಾಡುವಲ್ಲಿ ಮುನ್ನಡೆಯುತ್ತಿದೆ. ಮಕ್ಕಳು ಬಂಥನಾಳ ಶಿವಯೋಗಿಗಳ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಗುರುವಾರ ವಿಜಯಪುರದ ಇಟ್ಟಂಗಿಹಾಳದಲ್ಲಿ ವೇದ ಅಕಾಡೆಮಿ ನೂತನ ಕಟ್ಟಡ ಲೋಕಾರ್ಪಣೆ, ಬಂಥನಾಳ ಶಿವಯೋಗಿಗಳ ಜಯಂತೋತ್ಸವ ಸಮಾರಂಭ ಹಾಗೂ ಸಾಧಕರಿಗೆ ಶ್ರೀ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಂಥನಾಳ ಶಿವಯೋಗಿಗಳ ಹೆಸರಿನಲ್ಲಿ ಶಿವಾನಂದ ಕೆಲೂರ ಶೈಕ್ಷಣಿಕ ಸೇವೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಉತ್ಸಾಹದಿಂದ ಈ ರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಮನೆಯಂತಹ ಬೃಹತ್ ವಿಶಾಲ ಕಟ್ಟಡದಲ್ಲಿ ಶಾಲೆ ಇದ್ದು ಅಲ್ಲಿ ಉತ್ತಮ ಶಿಕ್ಷಕರು ಇಲ್ಲದಿದ್ದರೆ ಜ್ಞಾನದೀಕ್ಷೆ ದೊರಕುವುದಿಲ್ಲ. ಶಿಕ್ಷಕರೇ ಶಿಕ್ಷಣ ಸಂಸ್ಥೆ ಹೃದಯ. ಉತ್ತಮ ಶಿಕ್ಷಕರಿಂದ ಶಿಕ್ಷಣ ಸಂಸ್ಥೆ ಉನ್ನತವಾಗಿ ಬೆಳೆದು ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುತ್ತದೆ ಎಂದ ಅವರು, ಮಕ್ಕಳ ಬಗ್ಗೆ ಪಾಲಕರು ವಿಶೇಷ ಕನಸುಗಳನ್ನು ಹೊಂದಿರುತ್ತಾರೆ. ತಮ್ಮ ಮಗ ವೈದ್ಯನಾಗಬೇಕು, ವಿಜ್ಞಾನಿಯಾಗಬೇಕು, ನಾಗರಿಕ ಸೇವಾ ಅಧಿಕಾರಿಯಾಗಬೇಕು ಎಂಬ ಉನ್ನತ ಕನಸು ಕಟ್ಟಿಕೊಂಡಿರುತ್ತಾರೆ. ಈ ಕನಸುಗಳು ನನಸಾಗಿಸಲು ಅದಕ್ಕೆ ಜ್ಞಾನದ ನೀರೆರೆದು ಪೋಷಿಸುವವರೇ ಶಿಕ್ಷಕರು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಯರನಾಳ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ ಆಶೀವರ್ಚನ ನೀಡಿ, ವಿಜಯಪುರ ಜಿಲ್ಲೆಗೆ ಜ್ಞಾನವೆಂಬ ಬೆಳಕು ತೋರಿದ ಬಂಥನಾಳ ಶಿವಯೋಗಿಗಳು ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಮುಡುಪಾಗಿರಿಸಿದರು. ಮಠಾಧೀಶರು ಮನುಕುಲದ ಆಸ್ತಿ. ಪ್ರತಿಯೊಬ್ಬರನ್ನು ಜ್ಞಾನವಂತರನ್ನಾಗಿಮಾಡಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಧರ್ಮದ ಆದ್ಯ ಉದ್ದೇಶ. ದಯೆ, ಕರುಣೆ, ಸಹಾಯ, ಪರೋಪಕಾರಗಳು ಧರ್ಮದ ಮೂಲ ಸಾರಗಳು. ಈ ಸಾರವನ್ನು ಅರ್ಥೈಸಿಕೊಂಡು ಜ್ಞಾನವಂತರಾಗಿ, ನೀತಿವಂತರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವೇದ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ. ಶಿವಾನಂದ ಕೆಲೂರ ಮಾತನಾಡಿ, ಬಂಥನಾಳ ಶಿವಯೋಗಿಗಳ ಜೀವನ ಎಲ್ಲರಿಗೂ ದಿಕ್ಸೂಚಿ, ವಿಜಯಪುರ ಜಿಲ್ಲೆಗೆ ಶೈಕ್ಷಣಿಕ ಬೆಳಕು ತೋರಿದ ಬಂಥನಾಳ ಶಿವಯೋಗಿಗಳು, ಬಿ.ಎಂ. ಪಾಟೀಲರು ಈ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಹಾಕರರು ಎಂದರು. ಮಕ್ಕಳಿಗೆ ಉದಾತ್ತ ಸಂಸ್ಕಾರ, ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯದಿಂದ ಈ ಅಕಾಡೆಮಿ ಸ್ಥಾಪಿಸಲಾಗಿದೆ ಎಂದರು.
ಉಪನ್ಯಾಸ ಮಂಡಿಸಿದ ಉಪನ್ಯಾಸಕ ಪ್ರೊ. ಐ.ಬಿ. ಹಿರೇಮಠ ಮಾತನಾಡಿ, ಬಂಥನಾಳ ಶಿವಯೋಗಿಗಳು ಈ ನಾಡಿಗೆ ನೀಡಿದ ಕೊಡುಗೆ ಅನನ್ಯ, ಆಧ್ಯಾತ್ಮಿಕತೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘ, ಶ್ರೀಗಳ ಕೊಡುಗೆ ಹಾಗೂ ಜೀವನ ಚರಿತ್ರೆಯನ್ನು ಕೆಜಿಯಿಂದ ಹಿಡಿದು ಪಿಜಿಯವರೆಗೆ ಪಠ್ಯಕ್ರಮವಾಗಿ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆ ಡಿಡಿಪಿಐ ಎನ್.ಎಚ್. ನಾಗೂರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ, ಲೋಗಾಂವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜುಗೌಡ ಬಿರಾದಾರ, ಶ್ರೀ ಅಸೋಸಿಯೇಷನ್ ನಿರ್ದೇಶಕಿ ಡಾ. ಭುವನೇಶ್ವರಿ ಮೇಲಿನಮಠ, ವಿಜಯಪುರ ಗ್ರಾಮೀಣ ವಿಭಾಗ ಬಿಇಒ ಆರ್.ಕೆ. ಆಂಜನೇಯ, ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ದಯಾನಂದ ಕೆಲೂರ, ಕಾರ್ಯದರ್ಶಿ ಎನ್.ಜಿ. ಯರನಾಳ, ಶಿವಲೀಲಾ ಕೆಲೂರ, ಪ್ರಾಚಾರ್ಯ ಬಿ.ಎಂ. ಸುನೀಲ, ರಶ್ಮಿ ಕವಟಗಿಮಠ, ಡಾ. ಮಹಾಂತೇಶ ಬಿರಾದಾರ, ಎಚ್. ವೆಂಕಟೇಶ, ಶರಣಪ್ಪ ಯಕ್ಕುಂಡಿ, ಡಾ. ರವಿಕುಮಾರ ಚೌಧರಿ ಉಪಸ್ಥಿತರಿದ್ದರು.
ಶ್ರೀ ರತ್ನ ಪ್ರಶಸ್ತಿ ಪ್ರದಾನ ವಿವಿಧ ರಂಗದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಬಾಗಲಕೋಟೆ ವಿ.ವಿ. ಉಪ ಕುಲಸಚಿವೆ ಡಾ. ರಾಜೇಶ್ವರಿ ಮಠದ, ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ಥಾಪಕಿ ಸಂಪದಾ ಶಿವಾನಂದ ಪಾಟೀಲ, ಗಣಿತ ಶಿಕ್ಷಕ ಎಸ್.ವಿ. ಬುರ್ಲಿ, ಸಂತ ಜೋಸೆಫ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅನಾಲಿಸಾ ಬಾಸ್ಕೋ, ಫಿನಿಕ್ಸ್ ಶಾಲೆ ಅಧ್ಯಕ್ಷೆ ಶಮಿತಾ ಪಿ. ಶೆಟ್ಟಿ ಅವರಿಗೆ ಶ್ರೀ ರತ್ನ ಪ್ರಶಸ್ತಿ ಪ್ರದಾನಮಾಡಿ, ಗೌರವಿಸಲಾಯಿತು.