ಬಂಡೆ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ: ಗೃಹ ಸಚಿವ ಆರಗ ಜ್ಞಾನೇಂದ್ರ

TTH WEB
Published on

ತೀರ್ಥಹಳ್ಳಿ: ಮೇಲಿನಕುರುವಳ್ಳಿ ಬಂಡೆ ಕಾರ್ಮಿಕರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಈ ವಿಚಾರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಾಜಕಾರಣದ ಮೂಲಕ ಕಾರ್ಮಿಕರನ್ನು ಹಾದಿ ತಪ್ಪಿಸಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.

ಸೋಮವಾರ ಮೇಲಿನಕುರುವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಂಡೆ ಮಾಲೀಕರು ಮತ್ತು ಕಾರ್ಮಿಕರ ಸಭೆಯಲ್ಲಿ ಮಾತನಾಡಿ, ಎರಡು ಅವಧಿಗೆ ಈ ಕ್ಷೇತ್ರದ ಶಾಸಕರಾಗಿದ್ದು ಮಾತ್ರವಲ್ಲದೆ ಎರಡೂವರೆ ವರ್ಷ ಸಚಿವರೂ ಆಗಿದ್ದರೂ ಬಂಡೆ ವಿಚಾರದಲ್ಲಿ ಏನೂ ಮಾಡಿಲ್ಲ. ಅಧಿಕಾರ ಇರುವಾಗ ಒಂದು ದಿನ ಭೂ ಮತ್ತು ಗಣಿ ಇಲಾಖೆ ಕಚೇರಿ ಅಥವಾ ಸಂಬಂಧಿಸಿ ಸಚಿವರನ್ನು ಭೇಟಿ ಮಾಡದೆ ಇದೀಗ ಉಪವಾಸ, ಧರಣಿ ಸತ್ಯಾಗ್ರಹ ಮಾಡುವ ಮೂಲಕ ನಿಮ್ಮನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ನನ್ನ ಅವಧಿಯಲ್ಲಿ ಕಾರ್ಮಿಕರು ಮಾತ್ರವಲ್ಲದೆ ತಾಲೂಕಿನಲ್ಲಿ ಮರಳು ಅಗತ್ಯ ಇರುವವರಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದೆ. ಅಧಿಕಾರಿಗಳಿಗೂ ಇಲ್ಲಿಗೆ ಬರುವುದಕ್ಕೆ ಅವಕಾಶ ನೀಡಿರಲಿಲ್ಲ. ಬಂಡೆಗೆ ಹೋಗದಂತೆ ಟ್ರೆಂಚ್ ಹೊಡೆಯುವುದಕ್ಕೂ ಹಿಂದಿನಿಂದ ಪಿತೂರಿ ನಡೆಸಿರುವ ಇವರೇ ಕಾರಣರಾಗಿದ್ದಾರೆ. ಬಂಡೆ ಟೆಂಡರ್ ಆಗಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಈ ಸಮಸ್ಯೆ ಬಗೆಹರಿಯುವುದು ನಿಮ್ಮಲ್ಲಿಯೂ ಕೆಲವರಿಗೆ ಬೇಕಿಲ್ಲ. ಈ ಸಮಸ್ಯೆ ಕಾಯಂ ಆಗಿ ಉಳಿಯುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರ ಮೇಲೆ ಕಿಡಿಕಾರಿದರು.

ನಾನು ಅವರಂತೆ ಶ್ರೀಮಂತನಲ್ಲ ಎಂದು ಕಿಮ್ಮನೆ ರತ್ನಾಕರ್ ೆಸರು ಹೇಳದೆ ದೂರಿದ ಸಚಿವರು, ಬಡತನದ ಬೇಗೆಯಿಂದ ಬಂದವನಾದ ನನಗೆ ಬಡವರ ಸಂಕಷ್ಟ ತಿಳಿದಿದೆ. ಎಂದಿಗೂ ನಿಮಗೆ ವಂಚನೆ ಮಾಡುವುದಿಲ್ಲ ಮತ್ತು ನಿಮ್ಮ ವೋಟಿನ ಬಗ್ಗೆಯೂ ಗಮನವಿಲ್ಲ. ಆದರೆ ಕಾನೂನಿಗೆ ವಿರುದ್ಧವಾದ ಭರವಸೆಯನ್ನೂ ನೀಡುವುದಿಲ್ಲ ಎಂದು ಹೇಳಿದರು.

ಮಾಮೂಲಿ ವಸೂಲಿ ಗೊತ್ತಿದೆ: ಬಂಡೆ ಹೆಸರಿನಲ್ಲಿ ದಂಧೆ ಮಾಡುವ ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ಅವಕಾಶವಾದಿಗಳು ನಿಮ್ಮಿಂದ ಮಾಮೂಲಿ ವಸೂಲಿ ಮಾಡುತ್ತಿರುವ ವಿಚಾರ ತಿಳಿದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಿಮ್ಮ ಶ್ರಮದ ದುಡಿಮೆಯ ಹಣದಲ್ಲಿ ಇವರಿಗೆ ಮಾಮೂಲಿ ಕೊಡುವ ಅಗತ್ಯವಿಲ್ಲ. ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದು ಕಾಯ್ದೆಯಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಇರುವುದರಿಂದ ಕೆಲ ಸಮಯ ತಗುಲುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net