ಬಂಡೀಪುರದಲ್ಲಿ ಸುವರ್ಣ ಸಂಭ್ರಮಕ್ಕೆ ಸಿದ್ಧತೆ

Bandipur-Entrance-2-1024x651
Published on

ಗುಂಡ್ಲುಪೇಟೆ: ಅರಣ್ಯ ಇಲಾಖೆ ಜನವರಿ 2 ಹಾಗೂ 3 ರಂದು ಬಂಡೀಪುರದ 50ನೇ ವರ್ಷಾಚರಣೆ ನಡೆಸುತ್ತಿದ್ದು, ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.

ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಮಂಡಳಿಯ ಸಭೆ ನಡೆಸಲಾಗುತ್ತಿದ್ದು, ಇದರಲ್ಲಿ 29 ಸದಸ್ಯರೂ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ.

ಬಂಡೀಪುರ ಯುವ ಮಿತ್ರ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ, ಹುಲಿ ಚಿತ್ರವಿರುವ ಅಂಚೆ ಲಕೋಟೆ ಮತ್ತು ಬಂಡೀಪುರದ 50 ವರ್ಷಗಳ ಇತಿಹಾಸ ಕೈಪಿಡಿ ಬಿಡುಗಡೆ ಹಾಗೂ ಮುಂದಿನ 10 ವರ್ಷಗಳವರೆಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಯೋಜನೆ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

1973ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದ ಸಂದರ್ಭದಲ್ಲಿ ಕೇವಲ 12 ಸಂಖ್ಯೆಯಲ್ಲಿದ್ದ ಹುಲಿಗಳ ಸಂಖ್ಯೆ ಸದ್ಯ 200ರ ಸಮೀಪದಲ್ಲಿದೆ. ಮುಂದಿನ ಜನಾಂಗವು ಅರಣ್ಯವನ್ನು ಪ್ರೀತಿಸುವಂತೆ ಮಾಡಬೇಕಾದ ಅಗತ್ಯ ಹೆಚ್ಚಾಗಿದೆ. ಅದಕ್ಕಾಗಿ ಬಂಡೀಪುರ ಯುವ ಮಿತ್ರ ಯೋಜನೆ ರೂಪಿಸಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಉಚಿತ ಸಫಾರಿ, ಮಧ್ಯಾಹ್ನ ಊಟ ನೀಡಿ ಅರಣ್ಯದ ಪರಿಚಯ ಮಾಡಿಕೊಡಲಾಗುವುದು. ಇದಕ್ಕಾಗಿ 26 ಲಕ್ಷ ರೂ. ವೆಚ್ಚದ ಎರಡು ಬಸ್‌ಗಳನ್ನು ಖರೀದಿಸಲಾಗಿದೆ. ದೇಶದಲ್ಲಿ ಬಂಡೀಪುರದಲ್ಲಿ ಮಾತ್ರ ಜಾರಿಗೆ ಬರುತ್ತಿರುವ ಈ ಯೋಜನೆಗೆ ಅದೇ ದಿನ ಸಚಿವರು ಚಾಲನೆ ನೀಡಲಿದ್ದಾರೆ.

ಮುಂದಿನ 10 ವರ್ಷಗಳ ಯೋಜನೆಯಲ್ಲಿ ಪ್ರವಾಸೋದ್ಯಮ ವಿಸ್ತರಿಸುವ ಸಲುವಾಗಿ ಕಬಿನಿ ಬ್ಯಾಕ್ ವಾಟರ್ ಪ್ರದೇಶದಲ್ಲಿ ಹೊಸದಾಗಿ ಸಫಾರಿ ವಲಯ ಆರಂಭಿಸಲು ಉದ್ದೇಶಿಸಲಾಗಿದೆ. ಮದ್ದೂರು ವಲಯದ ಹುಲಿ ಕಟ್ಟೆ ಹೊರತುಪಡಿಸಿ ಉಳಿದ ಎಲ್ಲ 52 ಕಳ್ಳಬೇಟೆ ಶಿಬಿರಗಳು ಉತ್ತಮ ಸ್ಥಿತಿಯಲಿಲ್ಲ. ಇವುಗಳ ಗುಣಮಟ್ಟ ಹೆಚ್ಚಿಸಿ ಸಿಬ್ಬಂದಿಗೆ ಮೂಲಸೌಕರ್ಯಗಳು ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net