

ಗುಂಡ್ಲುಪೇಟೆ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಒಂದಾಗಿರುವ ಬಂಡೀಪುರದಲ್ಲಿ ವ್ಯಾಘ್ರ ಗಣತಿ ನಡೆಯುತ್ತಿದೆ.
ಬಂಡೀಪುರ ವ್ಯಾಪ್ತಿಯಲ್ಲಿ ಒಟ್ಟು ಒಟ್ಟು 3 ಉಪ ವಿಭಾಗಗಳಿವೆ. ಇದರಲ್ಲಿ ಒಂದಾಗಿರುವ ಹೆಡಿಯಾಲ ಉಪ ವಿಭಾಗದಲ್ಲಿ ಈಗಾಗಲೇ ಹುಲಿ ಗಣತಿ ಪೂರ್ಣಗೊಂಡಿದೆ. ಬಂಡೀಪುರ ಮತ್ತು ಗುಂಡ್ಲುಪೇಟೆ ಉಪವಿಭಾಗಗಳಲ್ಲಿ ಬುಧವಾರದಿಂದ ಹುಲಿ ಗಣತಿ ಕಾರ್ಯ ಆರಂಭವಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಮೂರು ದಿನಗಳ ಕಾಲ ಕಾಲ್ನಡಿಗೆಯಲ್ಲಿ ಅರಣ್ಯದ ಎಲ್ಲ ಬೀಟ್‌ಗಳಲ್ಲಿ ಸಂಚರಿಸಿ ಕಣ್ಣಿಗೆ ಕಾಣಿಸುವ ಹುಲಿಗಳ ಗಣತಿ ಕೈಗೊಳ್ಳುವರು. ನಂತರ ಮೂರು ದಿನಗಳ ಕಾಲ ಕೆರೆಕಟ್ಟೆಗಳು ಹಾಗೂ ನೀರಿನ ಲಭ್ಯತೆಯಿರುವ ಸ್ಥಳಗಳಲ್ಲಿ ಕಾದು ಕುಳಿತು ನೀರು ಕುಡಿಯಲು ಬರುವ ಹುಲಿಗಳ ಸಂಖ್ಯೆಯನ್ನು ಗಣತಿ ಮಾಡುವರು. ಬಳಿಕ ಎರಡು ದಿನಗಳ ಕಾಲ ಲೈನ್ ಟ್ರ್ಯಾನ್ಸೆಕ್ಟ್‌ಗಳಲ್ಲಿ ಸಂಚರಿಸಿ ನೇರವಾಗಿ ಕಣ್ಣಿಗೆ ಕಾಣುವ ಹುಲಿಗಳು, ಅವು ಹಾದುಹೋಗಿರುವ ಹೆಜ್ಜೆ ಗುರುತುಗಳ ಗಣತಿ ಕೈಗೊಳ್ಳುವರು.
ಕ್ಯಾಮೆರಾ ಗಣತಿ ಪೂರ್ಣ: ಅರಣ್ಯ ಇಲಾಖೆ 2024ರ ಡಿಸೆಂಬರ್ ಹಾಗೂ 2025ರ ಜನವರಿ ತಿಂಗಳಿನಲ್ಲಿ ಕ್ಯಾಮರಾ ಮೂಲಕ ಗಣತಿ ನಡೆಸಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಬಫರ್ ವಲಯ ಸೇರಿದಂತೆ ಎಲ್ಲ 13 ವಲಯಗಳಲ್ಲಿಯೂ ಕ್ಯಾಮೆರಾ ಟ್ರ್ಯಾಪ್ ಪೂರ್ಣವಾಗಿದೆ. 900 ಕ್ಯಾಮೆರಾಗಳಲ್ಲಿನ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಗಣತಿ ಪೂರ್ಣಗೊಂಡ ನಂತರ ಎಲ್ಲವನ್ನೂ ನಿಖರವಾಗಿ ವಿಶ್ಲೇಷಿಸಿ ಹುಲಿಗಳ ಸಂಖ್ಯೆ ಕಂಡುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಗಣತಿಯಲ್ಲಿ ಉಂಟಾದ ಲೋಪದಿಂದ ಒಂದೇ ಹುಲಿ ಸಂಖ್ಯೆಯಲ್ಲಿ ಬಂಡೀಪುರ ನಂ.1 ಸ್ಥಾನದಿಂದ ವಂಚಿತವಾಗಿತ್ತು. ಆದ್ದರಿಂದ ಈ ಬಾರಿ ಅರಣ್ಯ ಇಲಾಖೆ ಎಚ್ಚರಿಕೆಯಿಂದ ದತ್ತಾಂಶ ಸಂಗ್ರಹಿಸುತ್ತಿದೆ. ಕಳೆದ ಬಾರಿ 191 ಹೆಚ್ಚು ಇದ್ದ ಹುಲಿಗಳ ಸಂಖ್ಯೆ ಈ ಬಾರಿ 220 ಹುಲಿಗಳು ಕಣ್ಣಿಗೆ ಬಿದ್ದಿವೆ. ಆದ್ದರಿಂದ ಈ ಬಾರಿ ದೇಶದಲ್ಲಿ ಬಂಡೀಪುರ ಹುಲಿಗಳ ಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆಯುವ ಸಂಭವ ಹೆಚ್ಚಾಗಿದೆ. ಎನ್.ಪಿ.ನವೀನ್ ಕುಮಾರ್, ಬಂಡೀಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ.