ಬಂಡೀಪುರದಲ್ಲಿ ವನ್ಯಜೀವಿಗಳ ಸಂತತಿ ಹೆಚ್ಚಳ

06-GPT-2
Published on

ಗುಂಡ್ಲುಪೇಟೆ: ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಹಾಗೂ ಅರಣ್ಯ ಸಂರಕ್ಷಣೆಯಿಂದ ಪ್ರತಿ ವರ್ಷವೂ ಬಂಡೀಪುರದಲ್ಲಿ ವನ್ಯಜೀವಿಗಳ ಸಂತತಿ ಹೆಚ್ಚಾಗುತ್ತಿದೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಡಾ.ರಮೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಮೇಲುಕಾನಮಹಳ್ಳಿ ಸಮೀಪ ಅರಣ್ಯ ಇಲಾಖೆಯ ಸಫಾರಿ ಟಿಕೆಟ್ ಕೌಂಟರ್ ಬಳಿ ಅರಣ್ಯ ಇಲಾಖೆ ಗುರುವಾರ ಆಯೋಜಿಸಿದ್ದ 68 ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಂಡೀಪುರವನ್ನು ಹುಲಿ ಯೋಜನೆಗೆ ಸೇರಿಸಿದ 50 ವರ್ಷಗಳಲ್ಲಿ ಹುಲಿಗಳ ಸಂಖ್ಯೆ 13ರಿಂದ 170ಕ್ಕೆ, 200ಕ್ಕೂ ಹೆಚ್ಚು ಚಿರತೆಗಳು ಹಾಗೂ 3440 ಆನೆಗಳಿವೆ. ಸುತ್ತಮುತ್ತಲಿನ ಗ್ರಾಮಗಳವರು ಉರುವಲುಗಾಗಿ ಕಾಡು ಅವಲಂಬಿಸುವುದನ್ನು ತಪ್ಪಿಸಲು 136 ಗ್ರಾಮಗಳಿಗೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗಿದೆ. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಅವರ ಪ್ರವಾಸಕ್ಕಾಗಿ 2 ಬಸ್‌ಗಳನ್ನು ಹಾಗೂ ಪ್ರತ್ಯೇಕ ಕ್ಯಾಂಪ್ ಮಾಡುವ ಉದ್ದೇಶವಿದೆ ಎಂದರು.

ವನ್ಯಜೀವಿ ಛಾಯಾಗ್ರಾಹಕ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಅತಿಹೆಚ್ಚು ವನ್ಯಜೀವಿ ಛಾಯಾಗ್ರಾಹಕರಿದ್ದು, ಎಲ್ಲರೂ ಬಂಡೀಪುರದಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರದರ್ಶಿಸಿ ಅತಿ ಹೆಚ್ಚಿನ ಪ್ರಶಸ್ತಿ ಪಡೆದಿದ್ದಾರೆ ಎಂದರು.

ವಲಯ ಮಟ್ಟದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇಲಾಖೆ ವತಿಯಿಂದ ಆಯೋಜಿಸಿದ್ದ ಮಾಂಸಾಹಾರಿ ಹಾಗೂ ಸಸ್ಯಾಹಾರಿ, ಪಕ್ಷಿ ಸಂಕುಲ ಕುರಿತ ಛಾಯಾಗ್ರಹಣ ಸ್ಪರ್ಧೆಯಲ್ಲಿ ಹವ್ಯಾಸಿ ಛಾಯಾಗ್ರಾಹಕರ ಜತೆ ಇಲಾಖೆಯ ಸಿಬ್ಬಂದಿ ಸ್ಪರ್ಧಿಸಿ ಬಹುಮಾನ ಬಾಚಿಕೊಂಡರು.

ಕಾರ್ಯಕ್ರಮದಲ್ಲಿ ಹಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ, ಉಪಾಧ್ಯಕ್ಷೆ ಗೀತಾ, ಮೈಸೂರು ವಲಯದ ಸಿಸಿಎಫ್ ಡಾ.ಮಾಲತಿಪ್ರಿಯ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net