

ಮೈಸೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ ರದ್ದಿಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ವಾಟಾಳ್ ನಾಗರಾಜ್ ಹಾರ್ಡಿಂಗ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅಪಾರ ವನ್ಯಜೀವಿ ಸಂಪತ್ತು ಹೊಂದಿದೆ. ವಿವಿಧ ಬಗೆಯ ಅತಿ ಹೆಚ್ಚು ಪ್ರಾಣಿ ಸಂಕುಲ ವಾಸಿಸುತ್ತಿವೆ. ರಾತ್ರಿ ವೇಳೆ ರಸ್ತೆಗಳನ್ನು ಸಹ ಕಾಡು ಪ್ರದೇಶ ಎಂದು ಭಾವಿಸಿ ಪ್ರಾಣಿಗಳು ವಿಶ್ರಮಿಸುತ್ತವೆ. ರಾತ್ರಿ ಸಂಚಾರ ಆರಂಭದಿಂದ ಪ್ರಾಣಿಗಳ ನೆಮ್ಮದಿ ಹಾಳು ಮಾಡಿದಂತಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ತಂಡದಿಂದ ಮರಗಳ ಹನನ ಕುರಿತು ಪ್ರತಿಕ್ರಿಯಿಸಿ, ಸಿನಿಮಾದವರಿಗೆ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಅವಕಾಶ ನೀಡಬಾರದು. ಶೂಟಿಂಗ್ ಎಂದು ಹೇಳಿಕೊಂಡು ಮರ ನಾಶ ಮಾಡಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ಆದರೆ ಸಾಲದು, ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು.
ಮುಂದೆ ಯಾವ ಸಿನಿಮಾ ಶೂಟಿಂಗ್‌ಗಳಿಗೂ ಅನುಮತಿ ನೀಡಬಾರದು. ಈ ಹಿಂದೆ ನಾಗರಹೊಳೆಯಲ್ಲಿ ಸಿನಿಮಾ ಶೂಟಿಂಗ್ ವೇಳೆ ಬೆಂಕಿ ಬಿದ್ದು, ಅಪಾರ ಪ್ರಮಾಣದಲ್ಲಿ ಅರಣ್ಯ ನಾಶವಾಗಿತ್ತು. ಈ ಹಿನ್ನೆಲೆಯಲ್ಲಿ, ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಮೂರು ಪಕ್ಷಗಳ ಭಾಷೆ ಸರಿಯಿಲ್ಲ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್‌ಖಾನ್ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅವರ ವೈಯಕ್ತಿಕ ವಿಚಾರ. ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣಿಗಳ ಭಾಷೆ ಮೂರೂ ಪಕ್ಷದಲ್ಲೂ ಸರಿಯಿಲ್ಲ. ಜೆಡಿಎಸ್‌ನವರದು ಬೊಂಬಾಯಿ, ಬಿಜೆಪಿಯವರು ಅವರನ್ನು ಮೀರಿಸುತ್ತಾರೆ.
ಇನ್ನೂ ಕಾಂಗ್ರೆಸ್‌ನವರ ಪದ ಬಳಕೆಯೂ ಸರಿಯಿಲ್ಲ. ಇನ್ನೂ 3 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ನಂತರ ರಾಜ್ಯದಲ್ಲಿ ಎಂತೆಂತಹ ರಾಜಕಾರಣಿಗಳು ಇರುತ್ತಾರೆ ನೋಡಿ. ಸಿದ್ದರಾಮಯ್ಯನ ಬಳಿಕ ರಾಜಕಾರಣಿಗಳ ಭಾಷೆ ಇನ್ನೂ ಕೆಟ್ಟದ್ದಾಗಿರುತ್ತದೆ ಎಂದರು.
ಸಮ್ಮೇಳನ ಹೆಸರಲ್ಲಿ ಮೋಜು ಮಸ್ತಿ
ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ತಿಂದು ತೇಗುತ್ತಾರೆ. 3 ದಿನಗಳ ಕಾಲ ಬಗೆಬಗೆಯ ಊಟ ಮಾಡುತ್ತಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡುತ್ತಾರೆ. 4ನೇ ದಿನ ಸಮ್ಮೇಳನಾಧ್ಯಕ್ಷರನ್ನು ಕೇಳುವವರೇ ಇರುವುದಿಲ್ಲ. ಮುಂದಿನ ವರ್ಷದ ಸಾಹಿತ್ಯ ಸಮ್ಮೇಳನದವರೆಗೂ ಕನ್ನಡ ಸಾಹಿತ್ಯ ಪರಿಷತ್ ಕುಂಭಕರ್ಣನಂತೆ ನಿದ್ರಾವಸ್ಥೆಯಲ್ಲಿರುತ್ತದೆ ಎಂದು ಕಿಡಿಕಾರಿದರು.
ನಿಜಲಿಂಗಪ್ಪ ಅವರ ಮನೆ ಸ್ಮಾರಕ ಮಾಡಿ
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಮನೆಯನ್ನು ರಾಜ್ಯ ಸರ್ಕಾರ ಕೊಂಡುಕೊಳ್ಳಲು ಮುಂದಾಗಿದೆ. ನಿಜಲಿಂಗಪ್ಪ ಅವರು ಅಪ್ರತಿಮ ರಾಜಕಾರಣಿ. ಅವರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ನೀಲಂ ಸಂಜೀವರೆಡ್ಡಿ ಅವರು ಉಪರಾಷ್ಟ್ರ ಪತಿಯಾಗಿದ್ದರಿಂದ ನಿಜಲಿಂಗಪ್ಪ ಅವರಿಗೆ ಪ್ರಧಾನಿಯಾಗುವ ಅವಕಾಶ ತಪ್ಪಿತು.
ಕಡೆಯ ದಿನಗಳಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ನಿಜಲಿಂಗಪ್ಪ ಚಿತ್ರದುರ್ಗದ ಅವರ ಮನೆಗೆ ಹೋಗಲು ಇಷ್ಟಪಟ್ಟರು. ಚಿತ್ರದುರ್ಗದ ಅವರ ಮನೆಯಲ್ಲೇ ಇಹಲೋಕ ತ್ಯಜಿಸಿದರು. ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.