

ಮೈಸೂರು: ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಬಲ್ಲಾಳ್ ವೃತ್ತದಿಂದ ರಾಮಮಂದಿರ ಮಾರ್ಗವಾಗಿ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ತೆರಳಿ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಹೊತ್ತು ವಾಹನಗಳ ಸಂಚಾರ ನಿಷೇಧ ಕ್ರಮವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಳ್ಳಲು ಮುಂದಾಗಿದೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪರಿಸರವಾದಿಗಳ, ವನ್ಯಜೀವಿಗಳ ಪ್ರೇಮಿಗಳ ಆತಂಕಕ್ಕೂ ಕಾರಣವಾಗಿದೆ ಎಂದು ಹೇಳಿದರು.
ರಾತ್ರಿ ಹೊತ್ತು ಈ ಅರಣ್ಯದಲ್ಲಿ ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ ಮಾಡಿಕೊಟ್ಟರೆ ಪ್ರಾಣಿಗಳು ಅಪಘಾತಕ್ಕೀಡಾಗಿ ಮೃತಪಡುವ ಸಾಧ್ಯತೆ ಇದೆ. ಈ ಹಿಂದೆಯೂ ವಾಹನಗಳಿಗೆ ಸಿಲುಕಿ ಬಹಳಷ್ಟು ಪ್ರಾಣಿಗಳು ಸತ್ತಿವೆ.
ಈ ಕಾರಣಕ್ಕೆ ರಾತ್ರಿ ಸಂದರ್ಭದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದನ್ನು ತೆರವುಗೊಳಿಸಿದರೆ ಮತ್ತೆ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಬರಲಿದೆ. ಇವುಗಳ ಸಂಖ್ಯೆ ಕಡಿಮೆಯಾಗಲು ಈ ಕ್ರಮ ನಾಂದಿ ಹಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ. ಅವುಗಳ ಆವಾಸಸ್ಥಾನಗಳನ್ನು ಹಾಳು ಮಾಡದೆ ಅವುಗಳನ್ನು ಉಳಿಸಿಕೊಳ್ಳಬೇಕಿದೆ. ಬಂಡೀಪುರದ ಬದಲಾಗಿ ರಾತ್ರಿ ಹೊತ್ತು ಸಂಚಾರಕ್ಕೆ ಪರ್ಯಾಯ ಮಾರ್ಗ ನಿರ್ಮಾಣ ಮಾಡಲಾಗಿದೆ. ಹೀಗಾಗಿ, ಬಂಡೀಪುರದಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಸಂಘಟನೆಯ ಗೌರವಾಧ್ಯಕ್ಷ ಕೆ.ಎಸ್.ನಾಗೇಂದ್ರ ಪ್ರಸಾದ್, ಅಧ್ಯಕ್ಷ ಆರ್ಯನ್ ಗಂಧದ ಗುಡಿ, ಮುಖಂಡರಾದ ಮನೋಹರ್‌ಗೌಡ, ಮೇಗನ್‌ಗೌಡ, ಪೃಥ್ವಿರಾಜ್, ಅರ್ಜುನ್ ಪಾರ್ಥ, ಲೋಹಿತ್‌ಶರ್ಮಾ, ದರ್ಶನ್ ಯದುರಾಜ್ ಇನ್ನಿತರರಿದ್ದರು.