ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಪುಂಡಾನೆ ಹಾವಳಿ

ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಪುಂಡಾನೆ ದಾಳಿಯಿಂದ ನೆಲಕಚ್ಚಿದ ಗೇಟು.
10-GPT-1B
Published on

ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ಜಕ್ಕಹಳ್ಳಿ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಪುಂಡಾನೆ ದಾಳಿ ನಡೆಸಿ ಮನೆಯನ್ನು ಭಾಗಶಃ ಧ್ವಂಸಗೊಳಿಸಿರುವುದು ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.


ಜಕ್ಕಹಳ್ಳಿ ಗ್ರಾಮದ ಅವಿನಾಶ್ ಎಂಬುವರ ಜಮೀನಿನಲ್ಲಿ ನಿರ್ಮಿಸಿರುವ ಮನೆಯ ಮೇಲೆ ಆನೆ ದಾಳಿ ನಡೆಸಿ ಮನೆ ಚಾವಣಿ, ಕಾಂಪೌಂಡ್ ಹಾಗೂ ಸುತ್ತಲೂ ಬೆಳೆದಿದ್ದ ತೆಂಗಿನ ಮರಗಳನ್ನು ನೆಲಕ್ಕುರುಳಿಸಿದೆ. ಕಿಟಕಿಯನ್ನು ಮುರಿದು ಸೊಂಡಿಲು ತೂರಿ ಈರುಳ್ಳಿ, ಆಹಾರ ಪದಾರ್ಥಗಳು, ಮಾರುಕಟ್ಟೆಗೆ ಕೊಂಡೊಯ್ಯಲು ಸಂಗ್ರಹಿಸಿದ್ದ ತರಕಾರಿ ಹಾಗೂ ತೆಂಗಿನ ಕಾಯಿಗಳನ್ನು ತಿಂದುಹಾಕಿದೆ. ಆನೆಯ ದಾಂಧಲೆಯನ್ನು ಎದುರಿಸಲಾಗದ ಮನೆಯವರು ಕತ್ತಲಿನಲ್ಲಿ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.


ಕಳೆದ ನಾಲ್ಕಾರು ತಿಂಗಳಿನಿಂದ ಬಂಡೀಪುರದತ್ತ ವಲಸೆ ಬಂದಿರುವ ಪುಂಡಾನೆಯೊಂದು ಕುಂದಕೆರೆ ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಗಳ ವ್ಯಾಪ್ತಿಯಲ್ಲಿ ಮನೆಗಳು ಹಾಗೂ ಜಮೀನುಗಳ ಮೇಲೆ ದಾಳಿ ನಡೆಸಿ ಆಸ್ತಿಗಳನ್ನು ನಾಶಮಾಡುತ್ತಿದೆ. ಕುಂದಕೆರೆ, ಬಾಚಹಳ್ಳಿ, ಕೆಬ್ಬೇಪುರ, ಜಕ್ಕಳ್ಳಿ, ಕಾರೇಮಾಳ, ಆಡಿನಕಣಿವೆ, ಎಲ್ಚೆಟ್ಟಿ, ಹುಂಡೀಪುರ, ಶಿವಪುರ ಸೇರಿದಂತೆ ಹಲವಾರು ಗ್ರಾಮಗಳ ಕಾಡಂಚಿನ ಜಮೀನುಗಳಲ್ಲಿ ದಾಂಧಲೆ ನಡೆಸಿ ಮನೆಯ ಗೇಟುಗಳು, ಕಾಂಪೌಂಡ್, ಚಾವಣಿ, ಡ್ರಿಪ್ ಹಾಗೂ ಪೈಪ್‌ಲೈನ್ ಸೇರಿದಂತೆ ಕೃಷಿ ಪರಿಕರಗಳು, ಬೆಳೆದುನಿಂತ ತೆಂಗಿನ ಮರಗಳನ್ನು ಕೆಡವಿ ಹಾಕಿದೆ. ಅಲ್ಲದೆ ಗಿರಿಜನರ ಮನೆಗಳನ್ನು ಕೆಡವಿ ಒಳಗೆ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ತಿಂದು ಹಾಕಿದೆ.


ಬಂಡೀಪುರ ಸುತ್ತಮುತ್ತಲೂ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸದ ಪರಿಣಾಮ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರಿಂದ ಈ ಭಾಗದ ಜನರು ರಾತ್ರಿ ವೇಳೆ ಮನೆಗಳಿಂದ ಹೊರಬರಲು ಹೆದರುವಂತಾಗಿದೆ. ಒಂಟಿ ಪುಂಡಾನೆ ಮನೆಗಳ ಮೇಲೆಯೇ ದಾಳಿ ನಡೆಸುತ್ತಿರುವುದರಿಂದ ಜೀವಭಯದಿಂದ ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗಳ ಕಾವಲಿಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ಅರಣ್ಯ ಇಲಾಖೆ ಬೆಳೆ ಹಾಗೂ ಆಸ್ತಿ ನಷ್ಟಕ್ಕೆ ಪುಡಿಗಾಸಿನ ಪರಿಹಾರ ನೀಡುತ್ತಿದೆ. ಆದ್ದರಿಂದ ಇನ್ನಾದರೂ ಆನೆ ಸೆರೆಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net