ಬಂಡೀಪುರ ಅರಣ್ಯದ ರಸ್ತೆ ಬದಿಗಳಲ್ಲಿ ವನ್ಯಜೀವಿಗಳು

04-GPT-1-
Published on

ಗುಂಡ್ಲುಪೇಟೆ: ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಅರಣ್ಯದ ರಸ್ತೆ ಬದಿಗಳಲ್ಲಿ ಪ್ರತಿ ದಿನವೂ ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರನ್ನು ಮುದಗೊಳಿಸುತ್ತಿದೆ.


ಈ ಹಿಂದೆ ಬಂಡೀಪುರದಿಂದ ಮುದುಮಲೈಗೆ ಹೋಗುವ ಅರಣ್ಯದ ರಸ್ತೆ ಬದಿಗಳಲ್ಲಿ ವ್ಯಾಪಕವಾಗಿ ಬೆಳೆದಿದ್ದ ಲಂಟಾನ ಹಾಗೂ ಹಿಪಥೋರಿಯಂ ಕಳೆಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ ವ್ಯೆ ಲೈನ್ ನಿರ್ಮಿಸಿದೆ. ಇದರಿಂದ ಹುಲ್ಲುಗಳ ನಡುವೆ ವನ್ಯಜೀವಿಗಳನ್ನು ನೋಡುವ ಭಾಗ್ಯ ಪ್ರವಾಸಿಗರಿಗೆ ಸಿಗುತ್ತಿದೆ. ಸಫಾರಿಗೆ ಹೋದರೂ ಅರಣ್ಯದೊಳಗೆ ಕಾಣಸಿಗದ ಎಷ್ಟೋ ವನ್ಯಜೀವಿಗಳು ರಸ್ತೆಗಳ ಬದಿಗಳಲ್ಲಿಯೇ ಕಂಡುಬರುತ್ತಿವೆ.


ಈ ಬಾರಿ ಉತ್ತಮ ಮಳೆ ಬಿದ್ದ ಪರಿಣಾಮ ಅರಣ್ಯ ಪ್ರದೇಶ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಕಾಡಿನೊಳಗಿನ ಕೆರೆಕಟ್ಟೆಗಳು ತುಂಬಿ ಹಳ್ಳಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ವನಸಿರಿಯ ವೈಭವ ಕಣ್ಮನ ಸೆಳೆಯುತ್ತಿದೆ. ಎತ್ತ ನೋಡಿದರೂ ಹಸಿರು ಮರಗಿಡಗಳು ಹಾಗೂ ಹುಲ್ಲಿನ ನಡುವೆ ಹಿಂಡು ಹಿಂಡಾಗಿ ಸಂಚರಿಸುತ್ತಿರುವ ಚುಕ್ಕೆ ಜಿಂಕೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.


ಮೇಲುಕಾಮನಹಳ್ಳಿಯ ಅರಣ್ಯ ಇಲಾಖೆ ಕಚೇರಿ ಸಮೀಪವೇ ಎರಡು ಚಿರತೆಗಳು ಒಟ್ಟಾಗಿ ಸಂಚರಿಸುತ್ತಿರುವುದು ಪದೇ ಪದೇ ಪ್ರವಾಸಿಗರ ಕಣ್ಣಿಗೆ ಬೀಳುತ್ತಿದೆ. ಹುಲುಸಾಗಿ ಬೆಳೆದ ಹುಲ್ಲು ಚಿಗುರು ಬಿದಿರು ಮೇಯುತ್ತಿರುವ ಗಜರಾಜ, ಮರಿಯನ್ನು ನಡುವೆ ಬಿಟ್ಟುಕೊಂಡು ಗುಂಪಾಗಿ ಸಾಗುವ ಆನೆಗಳ ಹಿಂಡು, ರಸ್ತೆ ದಾಟುವ ಒಂಟಿ ಸಲಗ, ಗೆದ್ದಿಲು ಹುಡುಕುತ್ತಾ ಸಾಗುವ ಕರಡಿ, ಹಸುರಿನ ನಡುವೆ ಕಂದು ಬಿಳಿ ಬಣ್ಣದಲ್ಲಿ ಥಟ್ಟನೆ ಎದುರಾಗುವ ಕಾಟಿಗಳು ಈ ಪ್ರವಾಸಿಗರಿಗೆ ಮುದ ನೀಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net