ಬಂಡೀಪುರ ಅರಣ್ಯ ವಲಯದಲ್ಲಿ ಗಸ್ತು ಹೆಚ್ಚಳ

03-JULY-GPT-2
Published on

 ಗುಂಡ್ಲುಪೇಟೆ: ಬಂಡೀಪುರ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರು ಕೋತಿಗಳು ಸೇರಿದಂತೆ ವನ್ಯಜೀವಿಗಳಿಗೆ ಆಹಾರ ನೀಡುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ಹೆಚ್ಚಿಸಿದ್ದಾರೆ.

ತಾಲೂಕಿನ ಕಂದೇಗಾಲ ಸಮೀಪ 18 ಕೋತಿಗಳಿಗೆ ಆಹಾರದಲ್ಲಿ ವಿಷಹಾಕಿ ಕೊಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ಬಂಡೀಪುರ ಮಾರ್ಗವಾಗಿ ಸಂಚರಿಸುವ ವಾಹನಗಳ ಸವಾರರು ಹಾಗೂ ಪ್ರವಾಸಿಗರು ರಸ್ತೆ ಬದಿಗಳಲ್ಲಿ ವನ್ಯಜೀವಿಗಳನ್ನು ಕಂಡರೆ ತಮ್ಮ ವಾಹನಗಳನ್ನು ನಿಧಾನಗೊಳಿಸುವುದು, ನಿಲ್ಲಿಸಿ ಫೋಟೋ ತೆಗೆಯುವುದು ಮಾಡುತ್ತಿದ್ದರು. ಪ್ರವಾಸಿಗರು ನೀಡುವ ತಿಂಡಿಯ ರುಚಿಕಂಡ ನವಿಲುಗಳು ಹಾಗೂ ಕೋತಿಗಳು ವಾಹನಗಳ ಬಳಿ ಬರುತ್ತಿವೆ. ಕೋತಿಗಳು ಎರಡು ಕಾಲುಗಳಲ್ಲಿ ನಿಂತು ತಿಂಡಿಗಾಗಿ ಅಂಗಲಾಚುತ್ತವೆ.

ಬಂಡೀಪುರ ಅರಣ್ಯದ ಮಾರ್ಗವಾಗಿ ಊಟಿ ಮತ್ತು ಸುಲ್ತಾನ್‌ಭತ್ತೇರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತಿದ್ದು, ಇವುಗಳಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಗಳಲ್ಲಿ ಕಾಡಿನಿಂದ ಹೊರಬರುವ ಕೋತಿಗಳು, ನವಿಲುಗಳು ಮುಂತಾದ ವನ್ಯಜೀವಿಗಳಿಗೆ ಪ್ರವಾಸಿಗರು ತಿಂಡಿ ತಿನಿಸುಗಳನ್ನು ನೀಡುವ ಮೂಲಕ ಪ್ರಾಣಿಗಳ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ, ಯಾವುದೇ ತಿಂಡಿ ತಿನಿಸು ನೀಡದಂತೆ ಅರಣ್ಯ ಇಲಾಖೆ ಅಲ್ಲಲ್ಲಿ ಸೂಚನಾಫಲಕ ಅಳವಡಿಸಿ ಬೈಕುಗಳಲ್ಲಿ ಸಂಚರಿಸುತ್ತಾ ಎಚ್ಚರಿಕೆ ನೀಡುತ್ತಿದ್ದರೂ ಪ್ರವಾಸಿಗರು ಇದನ್ನು ಪರಿಗಣಿಸುತ್ತಿಲ್ಲ.

ಇತ್ತೀಚೆಗೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನ ಕಂದೇಗಾಲ ಸಮೀಪ ಕೋತಿಗಳಿಗೆ ವಿಷವಿಕ್ಕಿದ ಪ್ರಕರಣಗಳು ನಡೆದ ನಂತರ ಅರಣ್ಯ ಇಲಾಖೆ ವನ್ಯಜೀವಿಗಳಿಗೆ ಆಹಾರ ನೀಡುವವರನ್ನು ತಡೆಗಟ್ಟಲು ಗಸ್ತು ಹೆಚ್ಚಿಸಿದೆ. ಬಂಡೀಪುರದಿಂದ ಕೆಕ್ಕನಹಳ್ಳದವರೆಗೆ ಮತ್ತು ಮೇಲುಕಾಮನಹಳ್ಳಿಯವರೆಗೆ ನಾಲ್ಕು ಬೈಕ್‌ಗಳಲ್ಲಿ ಸಂಚರಿಸುವ ಸಿಬ್ಬಂದಿ ಅರಣ್ಯ ಇಲಾಖೆಯ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಹಿಂದಿನಿಂದಲೂ ಬಂಡೀಪುರ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರು ವನ್ಯಜೀವಿಗಳಿಗೆ ತಿಂಡಿ ತಿನಿಸು ನೀಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಕೋತಿ ಮತ್ತು ನವಿಲುಗಳು ಯಾವುದೇ ಭಯವಿಲ್ಲದೆ ವಾಹನಗಳ ಬಳಿ ಬರುತ್ತಿವೆ. ಈಗಾಗಲೇ ವಿಷಾಹಾರ ಸೇವನೆಯಿಂದ ವನ್ಯಜೀವಿಗಳು ಸಾವಿಗೀಡಾಗಿರುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಪ್ರಕರಣ ಬಂಡೀಪುರದಲ್ಲಿ ಸಂಭವಿಸಿದರೆ ವಿಷಾಹಾರ ಸೇವಿಸಿ ಸಾವಿಗೀಡಾದ ವನ್ಯಜೀವಿಯನ್ನು ಇತರ ಪ್ರಾಣಿಗಳು ತಿನ್ನುವ ಸಾಧ್ಯತೆಗಳಿವೆ. ಇದರಿಂದ ಇಡೀ ಜೀವ ಸಂಕುಲವೇ ಅಪಾಯಕ್ಕೆ ಸಿಲುಕುವ ಸಂಭವವಿದೆ. ಆದ್ದರಿಂದ ಅರಣ್ಯ ಇಲಾಖೆ ಇನ್ನೂ ಹೆಚ್ಚಿನ ಗಸ್ತು ನಡೆಸಿ ವನ್ಯಜೀವಿಗಳಿಗೆ ತಿಂಡಿ ನೀಡದಂತೆ ಹೆಚ್ಚಿನ ಅರಿವು ಮೂಡಿಸಬೇಕು.

ವಿದ್ಯಾಶಂಕರ್, ಪರಿಸರ ಪ್ರೇಮಿ, ಗುಂಡ್ಲುಪೇಟೆ.

ಈಗಾಗಲೇ ಎರಡು ಬೈಕುಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಪ್ರಕರಣದ ನಂತರ ಇನ್ನೂ ಎರಡು ವಾಹನಗಳನ್ನು ನಿಯೋಜಿಸಿ ಗಸ್ತು ಹೆಚ್ಚಿಸಲಾಗಿದೆ. ಅರಣ್ಯದ ಪ್ರವೇಶದಲ್ಲಿ ಪ್ರವೇಶ ಶುಲ್ಕ ಸಂಗ್ರಹಿಸುವ ಸ್ಥಳಗಳಲ್ಲಿ ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.

ಎನ್.ಸಿ.ಮಹದೇವ, ಬಂಡೀಪುರ ವಲಯಾರಣ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net