

ಮೈಸೂರು: ಯಾವ ಬಂಡವಾಳಶಾಹಿ ವ್ಯವಸ್ಥೆ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಮೌಲ್ಯ ಎತ್ತಿಹಿಡಿಯಿತೋ ಇಂದು ಅದೇ ಮೌಲ್ಯವನ್ನು ಕಾಲಡಿಯಲ್ಲಿ ಹಾಕಿ ಹೊಸಕಿ ಹಾಕುತ್ತಿದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಕೆ.ಸೋಮಶೇಖರ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಮಿಕ ವರ್ಗದ ನಾಯಕ ಶಿವದಾಸ್ ಘೋಷ್ ಅವರ ಸ್ಮರಣ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವ ತೆತ್ತ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮೊದಲಾದ ಕ್ರಾಂತಿಕಾರಿಗಳು ಸೋವಿಯತ್ ರಷ್ಯಾದ ಮಾದರಿಯಲ್ಲಿ ಹೊಸ ಸಮಾಜವಾದಿ ಸಮಾಜ ಕಟ್ಟಬೇಕೆಂದು ಬಯಸಿದ್ದರು.
ಆದರೆ 1947ರ ಸ್ವಾತಂತ್ರ್ಯದ ಮೂಲಕ ರಾಜಕೀಯ ಅಧಿಕಾರವು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಹಿಡಿತದಿಂದ ಭಾರತೀಯ ಬಂಡವಾಳ ಶಾಹಿಗಳ ಕೈಗೆ ಹಸ್ತಾಂತರಗೊಂಡಿತು. ಇದರಿಂದಾಗಿಯೇ ಬಂಡವಾಳಶಾಹಿಗಳ ಲಾಭದಾಸೆಗಾಗಿ ರೈತರು ಕಾರ್ಮಿಕರು ತೀವ್ರ ಶೋಷಣೆಗೆ ಗುರಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಇನ್ಫೋಸಿಸ್ ನಾರಾಯಣಮೂರ್ತಿಯಂತಹವರು ದೇಶಕ್ಕಾಗಿ ದಿನದ 12 ಗಂಟೆ ದುಡಿಯಬೇಕು ಎಂದು ಕರೆ ನೀಡುತ್ತಿದ್ದಾರೆ. ಆದರೆ ಇದು ದೇಶದ ಹಿತಕ್ಕಲ್ಲ ಬದಲಿಗೆ, ಬಡವರ ಬೆವರಿನಲ್ಲಿ ತಮ್ಮ ಖಜಾನೆ ತುಂಬಿಸುವ ಸಲುವಾಗಿ. ಇದಕ್ಕಾಗಿಯೇ ಕಾರ್ಮಿಕರು ಜೀವತೆತ್ತು ಗಳಿಸಿಕೊಂಡ ಕಾರ್ಮಿಕ ಕಾಯ್ದೆ ಕಾನೂನುಗಳನ್ನು ಕಿತ್ತೆಸೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಸ್ರೇಲ್- ಪ್ಯಾಲೆಸ್ಟೈನ್, ರಷ್ಯಾ-ಊಕ್ರೇನ್, ಇರಾನ್-ಇಸ್ರೇಲ್ ಸೇರಿದಂತೆ ಅನೇಕ ಯುದ್ಧಗಳು ನಡೆಯುತ್ತಿರುವುದೇ ತೈಲ, ಖನಿಜ ಸೇರಿದಂತೆ ಸಂಪನ್ಮೂಲಗಳ, ಮಾರುಕಟ್ಟೆಯ ನಿಯಂತ್ರಣಕ್ಕೆ ಹೊರತು ದೇಶಭಕ್ತಿಯ ಪ್ರದರ್ಶನಕ್ಕಲ್ಲ ಎಂದು ಹೇಳಿದರು.
ಇದಕ್ಕಾಗಿಯೇ ಎಲ್ಲ ದೇಶಗಳು ತಮ್ಮ ಬಜೆಟ್‌ನ ಬಹುಪಾಲು ಮೊತ್ತವನ್ನು ಖರ್ಚು ಮಾಡುತ್ತಿವೆ. ಆದರೆ ಖಾಲಿ ಇರುವ ಹುದ್ದೆಗಳನ್ನು ತುಂಬುತ್ತಿಲ್ಲ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸಾರಿಗೆ, ವಿದ್ಯುತ್, ವಸತಿ, ಮೂಲಸೌಕರ್ಯಗಳಿಗೆ ಮಾಡಬೇಕಾದ ವೆಚ್ಚವನ್ನು ಕಡಿಮೆ ಮಾಡಿ ಖಾಸಗೀಕರಣ ಮಾಡುವ ಮೂಲಕ ಬಂಡವಾಳಗಾರರಿಗೆ ಮಾರುಕಟ್ಟೆಯನ್ನು ಸೃಷ್ಟಿಸಲಾಗುತ್ತಿದೆ.
ರೈತರ ಫಲವತ್ತಾದ ಕೃಷಿಭೂಮಿಯನ್ನು ಸರ್ಕಾರವೇ ಮುಂದೆ ನಿಂತು ಕಿತ್ತುಕೊಳ್ಳುತ್ತಿದೆ. ಇನ್ನೊಂದು ಕಡೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು
ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ, ಯುವಜನರನ್ನು ಮದ್ಯ, ಮಾದಕವಸ್ತುಗಳು, ಆಶ್ಲೀಲ ಸಿನಿಮಾಗಳು, ಕೋಮು ದ್ವೇಷ ಇತ್ಯಾದಿಗಳಿಗೆ ಬಲಿಯಾಗಿಸುವ ಷಡ್ಯಂತ್ರವನ್ನು ಸರ್ಕಾರಗಳೇ ಮಾಡುತ್ತಿವೆ. ಸರ್ಕಾರಗಳನ್ನು ಬದಲಾಯಿಸುವುದರಿಂದ ಈ ಸಮಸ್ಯೆಗಳು ಬಗೆಹರಿಯುವುದಿಲ್ಲ.
ಬದಲಿಗೆ ನೈತಿಕ ಮೌಲ್ಯ ಅಧಃಪತನದ ವ್ಯಕ್ತಿವಾದ, ಸ್ವಾರ್ಥ, ಲಾಭಕೋರತನದ ಸಮ್ಮಿಶ್ರಣವಾದ ಈ ಕೊಳೆತ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆದು, ಕಾರ್ಮಿಕ ವರ್ಗದ ನೇತೃತ್ವದಲ್ಲಿ ಉನ್ನತ ನೀತಿ ನೈತಿಕತೆಯ ಆಧಾರದಲ್ಲಿ ಸಮಾಜವಾದಿ ವ್ಯವಸ್ಥೆ ಸ್ಥಾಪಿಸಬೇಕಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ರವಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಿರಹಿತ ಹೋರಾಟದ ಕ್ರಾಂತಿಕಾರಿ ಸಂಘಟನೆಯಾಗಿದ್ದ ಅನುಶೀಲನ ಸಮಿತಿ ಮೂಲಕ ತಮ್ಮ ಎಳೆಯ ವಯಸ್ಸಿನಲ್ಲಿಯೇ ಹೋರಾಟದ ಕಣಕ್ಕೆ ಧುಮುಕಿದ ಶಿವದಾಸ್ ಘೋಷ್ ಅವರು 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಕಾರಣದಿಂದ ಜೈಲುವಾಸಕ್ಕೆ ಗುರಿಯಾಗಿದ್ದರು.
ನಂತರ ಮಾರ್ಕ್ಸ್‌ವಾದಕ್ಕೆ ಆಕರ್ಷಿತರಾಗಿದ್ದ ಅವರು ಸಂಗಾತಿಗಳೊಡನೆ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಅನ್ನು 1948ರಲ್ಲಿ ಪ್ರಾರಂಭಿಸಿದ್ದರು. ಸಮಾಜವಾದಿ ಕ್ರಾಂತಿಯನ್ನು ಯಶಸ್ವಿಗೊಳಿಸಲು ಶಿವದಾಸ್ ಘೋಷ್ ಚಿಂತನೆ ಅನಿವಾರ್ಯ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯರಾದ ಎಂ .ಉಮಾದೇವಿ, ಚಂದ್ರಶೇಖರ್ ಮೇಟಿ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಸ್. ಸಂಧ್ಯಾ, ಜಿ.ಎಸ್.ಸೀಮಾ , ಹರೀಶ್, ಸುನಿಲ್ ಇತರರು ಇದ್ದರು.