

ಹನೂರು: ತಾಲೂಕಿನ ಬಂಡಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯನ್ನು ಖಂಡಿಸಿ ಹಾಗೂ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸಿ ಮಂಗಳವಾರ ಫೇಸ್‌ಬುಕ್ ಖಾತೆಯೊಂದರಲ್ಲಿ ದೃಶ್ಯವನ್ನು ಹರಿಬಿಡಲಾಗಿದ್ದು, ವೈರಲ್ ಆಗಿದೆ.
ಬಂಡಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯ ಡಾ.ಪ್ರಕಾಶ್ ಅವರನ್ನು ನಿಯೋಜಿಸಲಾಗಿದ್ದು, ಅವರನ್ನೇ ತಾಲೂಕು ಪ್ರಭಾರ ಆರೋಗ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಹಾಗಾಗಿ ತಾಲೂಕು ಆರೋಗ್ಯ ಕೇಂದ್ರಗಳ ನಿರ್ವಹಣೆ, ಮರಣೋತ್ತರ ಪರೀಕ್ಷೆ, ಆಡಳಿತ ನಿರ್ವಹಣೆ ಹಾಗೂ ಇನ್ನಿತರ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಈ ಆರೋಗ್ಯ ಕೇಂದ್ರಕ್ಕೆ ಸರಿಯಾಗಿ ಆಗಮಿಸಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಈ ಆರೋಗ್ಯ ಕೇಂದ್ರಕ್ಕೆ ಅಲಗಾಪುರ, ಶಾಗ್ಯ, ತೊಮಿಯಾರ್‌ಪಾಳ್ಯ, ಪುಷ್ಪಪುರ, ಗಾಣಿಗಮಂಗಲ ಹಾಗೂ ಈ ಭಾಗದ ಇನ್ನಿತರ ಗ್ರಾಮದ ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. ಮಂಗಳವಾರ ಕೇಂದ್ರಕ್ಕೆ ರೋಗಿಗಳು ಅದರಲ್ಲೂ ವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಇಲ್ಲಿ ನರ್ಸ್ ಒಬ್ಬರೇ ಚಿಕಿತ್ಸೆ ನೀಡುತ್ತಿದ್ದರು. ಇದರಿಂದ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತಿದ್ದರು. ಕೆಲವರು ಆಸ್ಪತ್ರೆಯ ಆವರಣದಲ್ಲಿಯೇ ಆಯಾಸಗೊಂಡು ಮಲಗಿದ್ದರು. ಈ ಅವ್ಯವಸ್ಥೆಯ ದೃಶ್ಯವನ್ನು ಸೆರೆ ಹಿಡಿದು ಸದಾಶಿವ ಬೆಟ್ಟಪ್ಪ ಬಂಡಳ್ಳಿ ಫೇಸ್‌ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಹಲವರು ಕಾಮೆಂಟ್ ಮಾಡಿದ್ದಾರೆ.