ಬಂಜಾರಾ ಸಮಾಜದಿಂದ ಪ್ರತಿಭಟನೆ

_MG_7708
Published on

ವಿಜಯಪುರ : ಮಂಡ್ಯ ಜಿಲ್ಲೆಯ ಮದ್ದೂರಿಗೆ ಕೂಲಿ ಮಾಡಲು ವಲಸೆ ಹೋಗಿದ್ದ ಬಂಜಾರಾ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಬರ್ಬರವಾಗಿ ಕೊಲೆಗೈದ ಆರೋಪಿಯನ್ನು ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಶುಕ್ರವಾರ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಂಜಾರಾ ಕ್ರಾಂತಿದಳದ ಅಧ್ಯಕ್ಷ ಶಂಕರ ಚವ್ಹಾಣ್ ಮಾತನಾಡಿ, ಕಬ್ಬು ಕಟಾವು ಮಾಡಲು ಹೋಗಿದ್ದ ಬಂಜಾರಾ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಬರ್ಬರ ಕೊಲೆ ನಡೆದಿರುವುದನ್ನು ಬಂಜಾರಾ ಸಮಾಜವು ತೀವ್ರವಾಗಿ ಖಂಡಿಸುತ್ತದೆ. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೈದ್ಯ ಡಾ.ಬಾಬುರಾಜೇಂದ್ರ ನಾಯಕ ಮಾತನಾಡಿ, ಹೊಟ್ಟೆಪಾಡಿಗಾಗಿ ದುಡಿಯಲು ಬಳ್ಳಾರಿ ಜಿಲ್ಲೆಯಿಂದ ದೂರದ ಮಂಡ್ಯ ಜಿಲ್ಲೆಗೆ ಕುಟುಂಬದ ಜತೆಗೆ ವಲಸೆ ಹೋಗಿದ್ದ ಹೊಸಪೇಟೆ ತಾಲೂಕಿನ ತಾಳೆಬಸಾಪುರ ತಾಂಡಾದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ ಕೊಲೆ ಮಾಡಿರುವುದು ಖಂಡನೀಯ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ತೊರವಿಯ ಗೋಪಾಲ ಮಹಾರಾಜರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯೂ ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಮಲ್ಲಿಕಾರ್ಜುನ ನಾಯಕ, ಬಿ.ಬಿ.ಲಮಾಣಿ, ಡಾ.ಅರವಿಂದ ಲಮಾಣಿ, ಸುರೇಶ ಬಿಜಾಪುರ, ಶಾರದಾ ಚವ್ಹಾಣ್, ರಾಜು ಜಾಧವ, ಸುನೀಲ ರಾಠೋಡ, ರಾಕೇಶ ರಜಪೂತ, ಪ್ರಕಾಶ ರಾಠೋಡ, ರಾಜು ನಾಯಕ, ಮೋಹನ ನಾಯಕ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net