

ತರೀಕೆರೆ: ಸಂಸ್ಕೃತಿ, ಸಂಪ್ರದಾಯಗಳಿಗೆ ಹೆಸರಾಗಿರುವ ಬಂಜಾರ ಸಮಾಜ ಸಂಘಟನೆಯಲ್ಲೂ ಮುಂದಾಗಬೇಕು ಎಂದು ಚಿತ್ರದುರ್ಗ ಸೀಬಾರ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಬಂಜಾರ ಸಮಾಜದಿಂದ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ, ಧರ್ಮ ಜಾಗತಿ ಸಭೆ ಹಾಗೂ ಬಂಜಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಮಾಜಕ್ಕೆ ಅರಿವಿನ ಕೊರತೆ ಇದ್ದಾಗ ಮಾರ್ಗದರ್ಶನ ನೀಡಲು ಮುಂದಾದ ಸಂತ ಸೇವಾಲಾಲರು ಸಕಲ ಪಾಂಡಿತ್ಯದ ಮೂಲಕ ಸುಧಾರಣೆಗಾಗಿ ಶ್ರಮಿಸಿದರು. ಈಗ ಸಮಾಜ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದು, ಯುವ ಪೀಳಿಗೆ ಜಾಗತರಾಗಿ ಸಂಘಟಿತರಾಗಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಖಾತೆಗಳಿಲ್ಲದ 10500 ಮನೆಗಳಿಗೆ 94ಸಿ ಅಡಿ ಇ-ಸ್ವತ್ತು ಮಾಡಿಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ. ಈ ದಿಸೆಯಲ್ಲಿ ಲಿಂಗದಹಳ್ಳಿ ಹೋಬಳಿಯ ದೊಡ್ಡ ನಿಂಗೇನಹಳ್ಳಿ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ನಾಗೇನಹಳ್ಳಿಯಲ್ಲಿ ದೇಗುಲ ನಿರ್ಮಾಣ ಜಾಗದ ಸಲುವಾಗಿ ಸಷ್ಟಿಯಾಗಿದ್ದ ಸಮಸ್ಯೆಯನ್ನು ಎರಡು ಕೋಮಿನ ಪ್ರಮುಖರ ಸಭೆ ಕರೆದು ಬಗೆಹರಿಸಲಾಗುವುದು. ಲಕ್ಕವಳ್ಳಿ ಕ್ರಾಸ್ ಸಮೀಪ ಸಂತ ಸೇವಾಲಾಲ್ ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಶ್ರೀ ಸಾಲು ಮರದಮ್ಮ ದೇವಿ ಆಲಯದಿಂದ ಡಾ. ಬಿ.ಆರ್.ಅಂಬೇಡ್ಕರ್ ಭವನದವರೆಗೆ ನಡೆಸಿದ ಮೆರವಣಿಗೆಯಲ್ಲಿ ಬಂಜಾರ ಸಮಾಜದ ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರು ಗಮನ ಸೆಳೆದರು.
ಶ್ರೀ ಶಿವಪ್ರಕಾಶ್ ಸ್ವಾಮೀಜಿ, ಲೇಖಕ ರುದ್ರ ಪುನೀತ್, ಸರಿಗಮಪ ರನ್ನರ್‌ಅಪ್ ರಮೇಶ್ ಲಂಬಾಣಿ, ಪ್ರಮುಖರಾದ ಢಾಕ್ಯಾನಾಯ್ಕ, ಯೋಗೇಂದ್ರನಾಯ್ಕ, ರಾಮಾನಾಯ್ಕ, ಮಂಜುನಾಥ, ಸತ್ಯಪ್ಪ, ಚಂದ್ರಾನಾಯ್ಕ ಇತರರಿದ್ದರು.