

ಸೊರಬ: ಬಂಗಾರಪ್ಪ ಅವರಿಗೆ ಬಂಗಾರಪ್ಪ ಅವರೇ ಸಾಟಿಯಾಗಿದ್ದು ರಾಜ್ಯದಲ್ಲಿ ಮತ್ತೊಬ್ಬ ಬಂಗಾರಪ್ಪ ಜನಿಸಲು ಸಾಧ್ಯವಿಲ್ಲ. ಆದರೆ ಅವರ ಮಾರ್ಗದರ್ಶನ, ಆದರ್ಶನಗಳನ್ನು ಮುಂದಿಟ್ಟುಕೊಂಡು ಮುನ್ನಡೆದಾಗ ಮಾತ್ರ ಜನಸಾಮಾನ್ಯರ ಹಿತ ಕಾಯಲು ಸಾಧ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ವಿವಿಧ ಪಕ್ಷದ ಮುಖಂಡರನ್ನು ಸನ್ಮಾನಿಸಿ ಮಾತನಾಡಿ, ಎಸ್. ಬಂಗಾರಪ್ಪ ಅವರನ್ನು ನಾಯಕರನ್ನಾಗಿ ಬೆಳೆಸಿದವರು ಕ್ಷೇತ್ರದ ಮತದಾರೇ ಹೊರತು ನಾನಾಗಲಿ ಅಥವಾ ಕುಮಾರ್ ಬಂಗಾರಪ್ಪ ಅವರಲ್ಲ ಎಂದರು.
ರಾಜಕೀಯ ಜೀವನ ಸೊರಬ ಕ್ಷೇತ್ರದಿಂದ ಆರಂಭವಾಗಿದ್ದು ಸತತ ಸೋಲುಗಳಿಂದ ಕಂಗೆಟ್ಟವರು ಕ್ಷೇತ್ರ ಬದಲಿಸುತ್ತಿದ್ದರು. ಆದರೆ ಕ್ಷೇತ್ರದ ಜನತೆಗೆ ಇಟ್ಟಿರುವ ವಿಶ್ವಾಸಕ್ಕಾಗಿ ಕ್ಷೇತ್ರದಲ್ಲಿಯೇ ಉಳಿದಿದ್ದೇನೆ. ವಿವಿಧ ಕಾರಣಗಳಿಂದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಂತೆ ಬಂಗಾರಪ್ಪ ಅವರ ಪುತ್ರ ಎನ್ನುವ ಕಾರಣಕ್ಕಾಗಿ ಹಾಗೂ ಜೆಡಿಎಸ್‍ನಲ್ಲಿ ರಾಜ್ಯಮಟ್ಟದ ಜವಾಬ್ದಾರಿ ನಿರ್ವಹಿಸಿದ್ದರಿಂದ ರಾಜ್ಯ ಮಟ್ಟದ ಹುದ್ದೆ ನೀಡಲು ಕಾಂಗ್ರೆಸ್ ವರಿಷ್ಠರು ಮುಂದಾದರು. ಪಕ್ಷಕ್ಕಾಗಿ ಕೆಲ ಕಾಲ ದುಡಿದು ನಂತರ ಹುದ್ದೆಯನ್ನು ಪಡೆಯುವುದಾಗಿ ತಿಳಿಸಿದ್ದೆ. ಇದೀಗ ಮಹತ್ವದ ಮೂರು ಜವಾಬ್ದಾರಿಗಳನ್ನು ನನ್ನ ಹೆಗಲಿಗೆ ಪಕ್ಷ ನೀಡಿದೆ. ಪಕ್ಷ ನೀಡಿದ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿದ್ದು, ಕಾಂಗ್ರೆಸ್ ಅ„ಕಾರದಲ್ಲಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಕ್ಷೇತ್ರದಲ್ಲಿ ನನ್ನ ನಾಯಕತ್ವ ಬೆಂಬಲಿಸಿ ಅನೇಕರು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದನ್ನು ಸ್ವಾಗತಿಸುವೆ. ಜತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು.
ರೈತರಿಗೆ ಭೂಮಿ ನೀಡಿದ ಹೋರಾಟದ ಕ್ಷೇತ್ರದಲ್ಲಿಯೇ ಇಂದು ರೈತರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ತಾಳಗುಪ್ಪದಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗಿದೆ. ಇಂತಹ ಘಟನೆ ಕ್ಷೇತ್ರ ಮಾತ್ರವಲ್ಲದೆ ರಾಜ್ಯದಲ್ಲಿಯೇ ಮರುಕಳಿಸಬಾರದು ಎನ್ನುವುದಾದರೆ ನನಗೆ ಶಕ್ತಿ ನೀಡುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಬೇಕು. ಜನತೆ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದರೆ ರೈತರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಬಗರ್‍ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಿಪಂ ಮಾಜಿ ಸದಸ್ಯ ಸತೀಶ್ ಅರ್ಜುನಪ್ಪ ಮಾತನಾಡಿ, ಮಧು ಬಂಗಾರಪ್ಪ ಅವರು ಪ್ರತಿಪಕ್ಷದಲ್ಲಿದ್ದರೂ ನಮಗೆ ಶಿಷ್ಟಾಚಾರದ ಅನ್ವಯ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಕೊಡುತ್ತಿದ್ದರು. ಎಲ್ಲ ಪಕ್ಷದವರನ್ನೂ ವಿಶ್ವಾಸದಿಂದ ಕಾಣುವ ಗುಣ ಅವರಲ್ಲಿದೆ. ಕಾಂಗ್ರೆಸ್‍ಗೆ ಶಕ್ತಿ ತುಂಬುವ ಕೆಲಸ ಮಾಡುವ ಜತೆಗೆ ಮಧು ಬಂಗಾರಪ್ಪ ಅವರನ್ನು ಮುಂದಿನ ಶಾಸಕರನ್ನಾಗಿ ಮಾಡಿ ಸಚಿವರನ್ನಾಗಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ, ಮಹಿಳಾ ಅಧ್ಯಕ್ಷೆ ಸುಜಾತಾ ಜೋತಾಡಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ವಿ.ಗೌಡ, ಯುವ ಘಟಕದ ಅಧ್ಯಕ್ಷ ಕೆ.ಪಿ.ಪ್ರವೀಣ್‍ಕುಮಾರ್, ಮಾಜಿ ಜಿಪಂ ಸದಸ್ಯ ಶಿವಲಿಂಗೇಗೌಡ, ಕುಪ್ಪಗಡ್ಡೆ ಬ್ಯಾಂಕ್ ಮಾಜಿ ಅಧ್ಯಕ್ಷ ಎಲ್.ಜಿ. ರಾಜಶೇಖರ್, ವೀರೇಶ್ ಕೊಟಗಿ, ಮುಖಂಡರಾದ ಎಚ್.ಗಣಪತಿ, ಎಂ.ಡಿ.ಶೇಖರ್, ಶ್ರೀಕಾಂತ ಚಿಕ್ಕಶಕುನ, ನೂರ್ ಅಹ್ಮದ್ ಇತರರಿದ್ದರು.
ಕಾಂಗ್ರೆಸ್ ಸೇರ್ಪಡೆಯಾದವರು: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಅರ್ಜುನಪ್ಪ, ತಾಪಂ ಮಾಜಿ ಸದಸ್ಯರಾದ ಪುರುಷೋತ್ತಮ ಕುಪ್ಪಗಡ್ಡೆ, ಹನುಮಂತಪ್ಪ ಆನವಟ್ಟಿ, ವಿಜಯಕುಮಾರ್ ಜಡೆ, ದೂಗೂರು ಗ್ರಾಪಂ ಅಧ್ಯಕ್ಷೆ ತುಳಸಿ, ಉಪಾಧ್ಯಕ್ಷ -Àಯಾಜ್ ಅಹ್ಮದ್, ಉಳವಿ ಗ್ರಾಪಂ ಸದಸ್ಯೆ ನಾಗಮ್ಮ, ಭೈರಪ್ಪ, ಮುಖಂಡರಾದ ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಅಶೋಕ್ ಹೊಸಬಾಳೆ ಸೇರಿದಂತೆ ಅನೇಕ ಮುಖಂಡರು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರಿದರು.