

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಫ್ಲೈ ಓವರ್ ಸಂಚಾರ, ಅಂಡರ್ ಪಾಸ್ ಓಡಾಟ ಕನಸಿಗೆ ಕರೊನಾ ಕಲ್ಲು ಹಾಕಿದೆ. ಹಲವಾರು ಹೋರಾಟ, ಪ್ರತಿಭಟನೆ, ಟೋಲ್ ಬಂದ್ ಎಚ್ಚರಿಕೆ ನಂತರ ಕಾಮಗಾರಿಗೆ ವೇಗ ಸಿಕ್ಕಿದ್ದರೂ, ಕರೊನಾ ಮಾರಿಗೆ ಲಾಕ್‌ಡೌನ್ ಒಳಗೆ ಬಂಧಿಯಾಗಿದ್ದರಿಂದ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಪಡೆದ ನವಯುಗ ಕಂಪನಿ ಮಾಲೀಕರ ಮೇಲೆ ಐಟಿ ದಾಳಿ ನಂತರ ಹೆದ್ದಾರಿ ವಿಸ್ತರಣೆ ಒಮ್ಮೆ ಲಾಕ್ ಆಗಿತ್ತು. ಈಗ ಕರೊನಾ ಅಬ್ಬರಕ್ಕೆ ಹೆದ್ದಾರಿ ಕಾಮಗಾರಿ, ಸರ್ವೀಸ್ ರಸ್ತೆ, ಅಂಡರ್ ಪಾಸ್, ಫ್ಲೈ ಓವರ್ ಕೆಲಸಕ್ಕೆ ಎರಡನೇ ಬಾರಿ ಅಡ್ಡಿಯಾಗಿದೆ.
ಕಳೆದ ಹತ್ತು ವರ್ಷದಿಂದ ಕುಂದಾಪುರ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಶೀಘ್ರ ಮುಗಿಸಿ ಸಂಚಾರ ಮುಕ್ತವಾಗಬೇಕು ಎನ್ನುವುದು ಜನರ ಒತ್ತಾಯವಾಗಿತ್ತು. ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್, ಬಸ್ರೂರು ಮುರುಕೈ ಬಳಿ ಅಂಡರ್ ಪಾಸ್ ಪಡುಬಿದ್ರಿ ಬಳಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಪ್ರಸಕ್ತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆದ್ದಾರಿ ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳ ಜತೆ ಸಭೆ, ಮಾತುಕತೆ ನಡೆಸಿಲ್ಲ. ಕಾರ್ಮಿಕರ ಹಿತದೃಷ್ಟಿ ಹಾಗೂ ಕರೊನಾ ವೈರಸ್ ಹರಡದಂತೆ ಸರ್ಕಾರದ ಆದೇಶ ಇರುವುದರಿಂದ ಕಾಮಗಾರಿಗೆ ಒತ್ತಡ ಹಾಕಲು ಸಾಧ್ಯವಿಲ್ಲ. ಲಾಕ್‌ಡೌನ್ ಮುಗಿದ ನಂತರ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗುತ್ತದೆ. | ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ ಲಾಕ್‌ಡೌನ್ ಇರುವುದರಿಂದ ಸಾರ್ವಜನಿಕರು ಕಾಮಗಾರಿ ಆರಂಭಿಸುವಂತೆ ಒತ್ತಡ ಹಾಕುವಂತಿಲ್ಲ. ಕಟ್ಟಡ ಇನ್ನಿತರ ಕೆಲಸ ನಡೆಸಲು ಸರ್ಕಾರ ಸಮ್ಮತಿಸಿರುವುದರಿಂದ ಹೆದ್ದಾರಿ ಕಾಮಗಾರಿ ನಡೆಸಲು ಅಡ್ಡಿಯಾಗದು. ಲಾಕ್‌ಡೌನ್ ಮುಗಿದ ನಂತರವಾದರೂ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಿ, ಮಳೆಗಾಲದೊಳಗೆ ಪೂರ್ಣಗೊಳಿಸಬೇಕು. | ಕಿಶೋರ್ ಕುಮಾರ್ ಬಿ. ಅಧ್ಯಕ್ಷ, ಕಲಾ ಸಂಸ್ಥೆ ಕುಂದಾಪುರ