ಫ್ಲೈ ಓವರ್ ಕಾಮಗಾರಿ ಪುನಾರಂಭ

neeligin road
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಹೃದಯ ಭಾಗವಾದ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಸಂಚಾರ ನಿಯಂತ್ರಣದ ಸವಾಲಿನ ನಡುವೆಯೂ ಶುಕ್ರವಾರ ಫ್ಲೈ ಓವರ್ ಕಾಮಗಾರಿ ಪುನಾರಂಭಿಸಲಾಗಿದೆ.

ಚನ್ನಮ್ಮ ವೃತ್ತವನ್ನು ಸಂರ್ಪಸುವಲ್ಲಿ ನೀಲಿಜಿನ್ ರಸ್ತೆಯ ಅರ್ಧ ಭಾಗವನ್ನು ಬಂದ್ ಮಾಡಿ ಫ್ಲೈ ಓವರ್ ಕಾಮಗಾರಿ ಆರಂಭಿಸಲಾಗಿದೆ. ಇಲ್ಲಿ ಫ್ಲೈ ಓವರ್ ಪಿಲ್ಲರ್​ಗೆ ಜೆಸಿಬಿ ಬಳಸಿ ಅಗಳ ತೊಡಲಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಬಹು ದೊಡ್ಡ ಸ್ಥಳಕ್ಕೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಚನ್ನಮ್ಮ ವೃತ್ತದ ಬಳಿ ನೀಲಿಜಿನ್ ರಸ್ತೆಯ ಅಗಲ ಕಡಿಮೆಯಾಗಿದೆ. ಏಕಮುಖವಾಗಿ ಕೇವಲ ಒಂದು ಬಸ್ ಮಾತ್ರ ಸಂಚರಿಸಬಹುದಾಗಿದೆ. ಇದರಿಂದ ಚನ್ನಮ್ಮ ವೃತ್ತ, ದೇಶಪಾಂಡೆನಗರ, ನ್ಯೂ ಕಾಟನ್ ಮಾರ್ಕೆಟ್ ಪ್ರದೇಶದಲ್ಲಿ ಶುಕ್ರವಾರ ಸಂಚಾರ ಸಿಕ್ಕು ವಿಪರೀತವಾಗಿತ್ತು.

ಚನ್ನಮ್ಮ ವೃತ್ತದ ಬಳಿ ಕಾಮಗಾರಿ ಕೈಗೊಳ್ಳಲು 120 ದಿನಗಳ ಕಾಲ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ಲೈ ಓವರ್ ಕಾಮಗಾರಿ ಗುತ್ತಿಗೆ ಸಂಸ್ಥೆ ಝುಂಡು ಕನ್ಸಟ್ರಕ್ಷನ್ ಕಂಪನಿ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಸಂಚಾರ ನಿಯಂತ್ರಣ ಕುರಿತು ಹು-ಧಾ ಮಹಾನಗರ ಪಾಲಿಕೆ, ಹು-ಧಾ ಪೊಲೀಸ್ ಕಮಿಷನರೇಟ್, ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗ, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಇದೀಗ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಚನ್ನಮ್ಮ ವೃತ್ತಕ್ಕೆ 8 ರಸ್ತೆಗಳು ಸಂಧಿಸುತ್ತವೆ. ವಾಹನಗಳ ಓಡಾಟ ಅತಿಯಾಗಿರುವ ಇಲ್ಲಿಯ ಎಲ್ಲ ರಸ್ತೆಗಳಲ್ಲಿ ಯಾವ ರಸ್ತೆಯಲ್ಲಿ ಎಷ್ಟು ದಿನಗಳ ಕಾಲ ಸಂಚಾರ ಬಂದ್ ಮಾಡಬೇಕು ಎಂಬುದು ಸವಾಲಿನ ಕೆಲಸವಾಗಿದೆ.

‘ನೀಲಿಜಿನ್ ರಸ್ತೆಯ ಬಳಿ 15 ದಿನಗಳೊಳಗೆ ಫ್ಲೈ ಓವರ್ ಪಿಲ್ಲರ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಉಳಿದೆಡೆ ಕಾಮಗಾರಿ ನಡೆಸುವ ವೇಳೆ ಈ ಮಾರ್ಗವು ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಸಿಗಲಿದೆ. ಹಾಗಾಗಿ ಇಂದಿನಿಂದ ಕಾಮಗಾರಿ ಆರಂಭಿಸಿದ್ದೇವೆ. ಶನಿವಾರ (ಏ. 5) ಸಂಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಚನ್ನಮ್ಮ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net