ಫ್ಲೈ ಓವರ್​ಗೆ ಸಂಬಂಧವಿಲ್ಲ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ, ದಟ್ಟಣೆಯೂ ತಪ್ಪುವುದಿಲ್ಲ….

Road 1 NEW
Published on

ಹುಬ್ಬಳ್ಳಿ: ಇಲ್ಲಿಯ ಹಳೇ ಬಸ್ ನಿಲ್ದಾಣವನ್ನು ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಕಂಪನಿ 34.36 ಕೋಟಿ ರೂ. ವೆಚ್ಚದಲ್ಲಿ ಹೊಸ ನಿಲ್ದಾಣವನ್ನಾಗಿ ಮಾಡಲು ಮುಂದಾಗಿದ್ದು, ಇದು ಇನ್ನೊಂದು ಬಿಆರ್​ಟಿಎಸ್ ಯೋಜನೆಯಂತೆ ಆಗುವ ಅನುಮಾನ ಕಾಡತೊಡಗಿದೆ.

ರಾಜ್ಯದ ಪ್ರಥಮ ಬಿಆರ್​ಟಿಎಸ್ ನಿರ್ವಣದ ವೇಳೆ ದೂರದೃಷ್ಟಿಯ ಕೊರತೆ, ಜನಸಾಮಾನ್ಯರ ದಿನನಿತ್ಯದ ಅಗತ್ಯಗಳ ಅವಗಣನೆ, ವ್ಯಾವಹಾರಿಕವಲ್ಲದ ತಜ್ಞತೆಯ ಬಳಕೆ, ಸಾಮಾನ್ಯ ಜ್ಞಾನದ ಅನ್ವಯ ಇಲ್ಲದಿರುವಿಕೆ ಮುಂತಾದ ಕಾರಣಗಳಿಂದಾಗಿ ಇದೊಂದು ಬಿಳಿಯಾನೆಯಾಗಿ ಮಾರ್ಪಟ್ಟಿದೆ. ಉದ್ಘಾಟನೆಯಾಗಿ ವರ್ಷದ ನಂತರವೂ ಅನೇಕ ಸಣ್ಣಪುಟ್ಟ ಸಮಸ್ಯೆಗಳು ಕಾಡುತ್ತಿದ್ದು, ಜನಸಾಮಾನ್ಯರು ಹಿಡಿಶಾಪ ಹಾಕುವಂತಾಗಿದೆ.

ಹೀಗಾಗಿ, ಬೃಹತ್ ಯೋಜನೆಯ ಅಸಮರ್ಪಕ ಜಾರಿಗೆ ಉದಾಹರಣೆಯಾಗಿದೆ.

ಅತ್ಯಂತ ಪ್ರಮುಖವಾದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ವಿಷಯದಲ್ಲಿಯೂ ಅಧಿಕಾರಿಗಳು ಅನೇಕ ಅಂಶಗಳನ್ನು, ಮುಖ್ಯವಾಗಿ ಮುಂದಿನ ವರ್ಷಗಳ ಬದಲಾವಣೆ ಮತ್ತು ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಹಳೇ ಬಸ್ ನಿಲ್ದಾಣದ ಒಟ್ಟು ಜಾಗ 3.9 ಎಕರೆ ಇದೆ. ಹೊಸ ನೀಲನಕ್ಷೆ ಪ್ರಕಾರ ಬೇಸ್​ವೆುಂಟ್, ಲೋವರ್ ಗ್ರೌಂಡ್ ಫ್ಲೋರ್ ಹಾಗೂ ಅಪ್ಪರ್ ಗ್ರೌಂಡ್ ಫ್ಲೋರ ಹೀಗೆ ನಿರ್ವಣಗೊಳ್ಳುವ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ, ವಾಣಿಜ್ಯ ಚಟುವಟಿಕೆಗೂ ಅವಕಾಶ ಕಲ್ಪಿಸಲಾಗುತ್ತದಂತೆ. 18 ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ಕಾಲಮಿತಿ ನಿಗದಿಪಡಿಸಲಾಗಿದೆ. ಸಿಟಿ ಬಸ್ ನಿಲ್ದಾಣ ಹಾಗೂ ಗ್ರಾಮೀಣ ಬಸ್​ಗಳು ಮತ್ತು ಬಿಆರ್​ಟಿಎಸ್ ಚಿಗರಿ ಬಸ್​ಗಳಿಗೂ ನಿಲುಗಡೆ, ಸಂಚಾರದ ಅವಕಾಶ ಇರುತ್ತದೆ. ಇದೊಂದು ಮಾದರಿ ಬಸ್ ನಿಲ್ದಾಣ, ಅತ್ಯಂತ ವಿನೂತನ ವಿನ್ಯಾಸದ್ದಾಗಿರುತ್ತದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು.

ಇಷ್ಟೆಲ್ಲ ವಿಶೇಷತೆಗಳಿರುವ ನಿಲ್ದಾಣವು, ಪಕ್ಕದಲ್ಲೇ ಹಾದುಹೋಗುವಂತೆ ಸದ್ಯದಲ್ಲೇ ನಿರ್ವಣವಾಗಲಿರುವ ಫ್ಲೈ ಓವರ್​ಗೆ ಸಂಪರ್ಕ ಹೊಂದಿರುವಂತೆ ಇರುತ್ತದೆಯೆ ಎಂಬ ಬಗ್ಗೆ ಯೋಜನೆಯಲ್ಲಿ ಸ್ಪಷ್ಟತೆ ಇಲ್ಲ.

ಯೋಜಿತ ಫ್ಲೈಓವರ್​ಗೆ ಬಸ್ ನಿಲ್ದಾಣದಿಂದ ಸಂಪರ್ಕ ಕೊಡುವ ಬಗ್ಗೆ ಅಧಿಕಾರಿಗಳು ಒಂದಿಷ್ಟು ಚರ್ಚೆ ಮಾಡಿರುವುದು ನಿಜ. ಆದರೆ, ಅಂಥ ಸಂಪರ್ಕಕ್ಕಾಗಿ ಮತ್ತಿಷ್ಟು ಹಣ ಬೇಕಾಗುತ್ತದೆ ಮತ್ತು ಫ್ಲೈ ಓವರ್ ನಿರ್ವಣವಾಗುವುದು ತಡವಾಗುತ್ತದೆ, ಅಷ್ಟರೊಳಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಮುಗಿಸಬೇಕಿದೆ. ಅಲ್ಲದೇ ಫ್ಲೈಓವರ್ ಮೇಲೆ ಓಡಾಡುವ ವಾಹನಗಳೇ ಬೇರೆ, ಬಸ್​ಗಳು ಅದರ ಮೇಲೆ ಹೋಗದಿದ್ದರೂ ನಡೆಯುತ್ತದೆ ಎಂದು ರ್ತಸಿದ್ದಾರೆ. ಹೀಗಾಗಿ, ಫ್ಲೈ ಓವರ್​ಗೂ ಬಸ್ ನಿಲ್ದಾಣಕ್ಕೂ, ಬಸ್ ಸಂಚಾರಕ್ಕೂ ಯಾವುದೇ ಸಂಬಂಧವಿಲ್ಲ. ಹೀಗೆ ವಿಚಿತ್ರವಾಗಿ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಹೀಗೆ ಮಾಡಬಹುದಿತ್ತು: ಹುಬ್ಬಳ್ಳಿಯಲ್ಲಿ ಅತಿಹೆಚ್ಚು ಸಂಚಾರ ದಟ್ಟಣೆ ಇರುವುದೇ ಚನ್ನಮ್ಮ ವೃತ್ತದಲ್ಲಿ. ಅದನ್ನು ತಪ್ಪಿಸಲೆಂದೇ ಫ್ಲೈ ಓವರ್ ನಿರ್ವಿುಸಲು ಉದ್ದೇಶಿಸಲಾಗಿದೆ. ಈ ಫ್ಲೈ ಓವರ್​ಗೆ ಸಂಪರ್ಕವಾಗುವಂತೆ ಬಸ್ ನಿಲ್ದಾಣ ನಿರ್ವಣಕ್ಕೆ ಒಂದಿಂಚು ಜಾಗವನ್ನೂ ಸ್ವಾಧೀನಪಡಿಸಿಕೊಳ್ಳಬೇಕಿಲ್ಲ. ಫ್ಲೈ ಓವರ್​ಗೂ ಬಸ್ ನಿಲುಗಡೆ ಸ್ಥಳಕ್ಕೂ ನೇರ ಸಂಪರ್ಕ ಕಲ್ಪಿಸಿದರಾಯಿತು ಅಷ್ಟೆ. ಬಸ್ ನಿಲ್ದಾಣದ ವಿನ್ಯಾಸದಲ್ಲಿ ನಾವೀನ್ಯತೆಯೊಂದಿಗೆ ವ್ಯಾವಹಾರಿಕತೆಯನ್ನೂ ಅಳವಡಿಸಿದರೆ ವಾಹನ ನಿಲುಗಡೆ, ವಾಣಿಜ್ಯ ಬಳಕೆ ಮೂಲಕ ನಿರಂತರ ಆದಾಯ, ಬಸ್​ಗಳು ನೇರವಾಗಿ ಬಂದು ಹೋಗುವುದರಿಂದ ವಾಹನ ದಟ್ಟಣೆ ತಪ್ಪಿಸುವಿಕೆ ಹೀಗೆ ಒಂದೇ ಯೋಜನೆಯಿಂದ ಹಲವು ಗುರಿ ಸಾಧಿಸಬಹುದಾಗಿದೆ. ಇರುವ 3.9 ಎಕರೆಯಲ್ಲೇ ತಳಭಾಗದಲ್ಲಿ ವಿಶಾಲ ರ್ಪಾಂಗ್, ಅದರ ಮೇಲ್ಭಾಗದಲ್ಲಿ ವಾಣಿಜ್ಯ ಸಂಕೀರ್ಣ, ಅದಕ್ಕಿಂತ ಮೇಲ್ಭಾಗದ ಎರಡು ಮಹಡಿಯಲ್ಲಿ ಬಸ್ ನಿಲ್ದಾಣ ಮಾಡಬಹುದಾಗಿದೆ.

ವಿಜಯಪುರ, ಗದಗ, ಬೆಂಗಳೂರು, ಕಾರವಾರ ಮಾರ್ಗದಲ್ಲಿ ಬರುವ ಬಸ್ಸುಗಳು ಫ್ಲೈಓವರ್ ಮೇಲಿನಿಂದ ನೇರವಾಗಿ ಹಳೇ ಬಸ್ ನಿಲ್ದಾಣಕ್ಕೆ ಬಂದು ತಲುಪಬಹುದು. ಹಾಗೆಯೇ ಧಾರವಾಡ, ಗೋಕುಲ ಮತ್ತಿತರ ಕಡೆ ಹೋಗುವ ಬಸ್ಸುಗಳು ಮೇಲ್ಸೇತುವೆ ಮೂಲಕವೇ ಸಲೀಸಾಗಿ ಸಾಗಬಹುದು. ಇದರಿಂದ, ಈಗ ಬಳಕೆಯಲ್ಲಿರುವ ಬಸ್ ನಿಲ್ದಾಣದ ಪಕ್ಕದ ಹು-ಧಾ ರಸ್ತೆಯಲ್ಲಿ ಅದೆಷ್ಟೋ ದಟ್ಟಣೆ ಕಡಿಮೆಯಾಗುತ್ತದೆ. ಸಿಟಿ ಬಸ್, ಬಿಆರ್​ಟಿಎಸ್ ಚಿಗರಿ ಈಗಿರುವ ಮಾರ್ಗದಲ್ಲೇ ಬರಬಹುದು. ಹೀಗೆ ಮಾಡದೇ ಇದ್ದರೆ ವೇಗದೂತ, ದೂರ ಸಂಚಾರಿ, ಗ್ರಾಮೀಣ, ನಗರ ಸಾರಿಗೆ,

ಬಿಆರ್​ಟಿಎಸ್, ಖಾಸಗಿ ನಗರ ಸಾರಿಗೆ… ಐದಾರು ನಮೂನೆಯ ಬಸ್ಸುಗಳಲ್ಲಿ ಎಲ್ಲವೂ ಹಾಲಿ ಇರುವ ನೆಲ ಮಾರ್ಗದಲ್ಲೇ ಸಂಚರಿಸುವುದರಿಂದ ಸದ್ಯ ಇರುವ ದಟ್ಟಣೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಅಲ್ಲದೇ, ಫ್ಲೈ ಓವರ್​ನಿಂದಾಗಿ ಈಗಿರುವ ರಸ್ತೆ ಸ್ವಲ್ಪ ಕಿರಿದಾಗುವುದರಿಂದ ಇನ್ನಷ್ಟು ಸಂಚಾರ ಸಮಸ್ಯೆ ಉಂಟಾಗುತ್ತದೆ. 300-400 ಕೋಟಿ ರೂ. ಖರ್ಚು ಮಾಡಿ ನಿರ್ವಿುಸುವ ಫ್ಲೈ ಓವರ್ ಇತರ ವಾಹನಗಳಿಗಷ್ಟೇ ಸೀಮಿತವಾಗುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವಲ್ಪ ಆಸಕ್ತಿ ವಹಿಸಿ, ಎಲ್ಲ ಕೋನಗಳಲ್ಲಿ ಯೋಚಿಸಿ, ಚನ್ನಮ್ಮ ವೃತ್ತದ ಫ್ಲೈಓವರ್ ಹಾಗೂ ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಎರಡನ್ನೂ ಸಮಗ್ರವಾಗಿ ಅಧ್ಯಯನ ಮಾಡಿ ಯೋಜನೆ ಜಾರಿ ಮಾಡಬೇಕು. ಒಂದೊಮ್ಮೆ ಕಾಮಗಾರಿ ಮುಗಿಸಿದ ಮೇಲೆ ಹೀಗಾಗಬೇಕಿತ್ತು, ಹಾಗಾಗಬೇಕಿತ್ತು ಎಂದು ಪರಿತಪಿಸುವುದು ಬೇಡ. ಫ್ಲೈಓವರ್ ಹೇಗಿರಬೇಕು, ಎಲ್ಲೆಲ್ಲಿ ರ‍್ಯಾಂಪ್ ಇರಬೇಕು, ಸಂಪರ್ಕ ಹೇಗೆ? ಬಸ್ ನಿಲ್ದಾಣಕ್ಕೆ ಸಂಪರ್ಕ ಇರಬೇಕೋ- ಬೇಡವೋ, ಬೇಕಾದರೆ ಯಾವ ರೀತಿಯಲ್ಲಿ ಇರಬೇಕು ಎಲ್ಲದರ ಬಗ್ಗೆ ಈಗಲೇ ತಜ್ಞರ ಸಲಹೆ ಪಡೆಯುವುದು ಒಳಿತು. ಇಲ್ಲದಿದ್ದರೆ ಬಿಆರ್​ಟಿಎಸ್ ಕತೆಯೇ ಆಗುವ ಸಾಧ್ಯತೆ ನಿಚ್ಚಳ.

ಶೆಟ್ಟರ್, ಜೋಶಿ ಅಸಹಾಯಕರೆ?: ಸಚಿವರಾದ ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿಯವರಿಗೆ ಆಧುನಿಕ ರೀತಿಯಲ್ಲಿ ವಿನ್ಯಾಸ ಮಾಡಿ ಫ್ಲೈ ಓವರ್, ಹಳೇ ಬಸ್ ನಿಲ್ದಾಣ ಸಂಪರ್ಕ ಮಾಡಿ, ಇರುವ ಜಾಗವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಹೇಳಿದವರಿದ್ದಾರೆ. ಆದರೆ, ಹಣ ಇಲ್ಲ ಎನ್ನುವುದು ಅವರ ಅಸಹಾಯಕತೆ ಯಂತೆ. ಕೆರೆ, ಉದ್ಯಾನದ ಹೆಸರಲ್ಲಿ ಸ್ಮಾರ್ಟ್ ಸಿಟಿಯ ಕೋಟಿ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹಳೇ ಬಸ್ ನಿಲ್ದಾಣದ ಮರು ನಿರ್ವಣವನ್ನು ಶಾಶ್ವತ ಪ್ರಯೋಜನಕಾರಿ ಯೋಜನೆಯಾಗಿಸಲು ಇನ್ನೂ 30-40 ಕೋಟಿ ರೂ. ಒದಗಿಸುವುದು ಅಸಾಧ್ಯವೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಹಳೇ ಬಸ್ ನಿಲ್ದಾಣವನ್ನು ಮೂರು ಮಹಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅತ್ಯಂತ ವಿನೂತನ ರೀತಿಯಲ್ಲಿ ನಕ್ಷೆ ರೂಪಿಸಲಾಗಿದ್ದು, ಬೇಸ್​ವೆುಂಟ್​ನಲ್ಲಿ ರ್ಪಾಂಗ್ ಇರಲಿದೆ. ಉಳಿದೆರಡು ಮಹಡಿಯಲ್ಲಿ ಸಿಟಿ ಹಾಗೂ ಗ್ರಾಮೀಣ ಬಸ್​ಗಳು ಓಡಾಡಲಿವೆ. ಕಟ್ಟಡದ ಮೇಲ್ಭಾಗ ಸಂಪೂರ್ಣ ಮುಕ್ತವಾಗಿರಲಿದ್ದು, ಮತ್ತೆ ಬೆಳೆಸಿಕೊಳ್ಳಲು ಹಾಗೂ ನಂತರದ ಅಭಿವೃದ್ಧಿ ಚಟುವಟಿಕೆಗೆ ಅವಕಾಶ ಇಟ್ಟುಕೊಳ್ಳಲಾಗಿದೆ. ಬೇಕಿದ್ದರೆ ಫ್ಲೈಓವರ್​ಗೂ ರ‍್ಯಾಂಪ್ ಮಾಡಿ ಸಂಪರ್ಕ ಕಲ್ಪಿಸಬಹುದು. | ಎಸ್.ಎಚ್. ನರೇಗಲ್ ಸ್ಮಾರ್ಟ್​ಸಿಟಿ ಲಿಮಿಟೆಡ್ ವಿಶೇಷಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net