

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಎಲಿವೇಟೆಡ್ ಕಾರಿಡಾರ್ ಫ್ಲೈಓವರ್ ನಿರ್ವಣದ ಕನಸು ನನಸಾಗಿಸುವ ಕಾಲ ಸನ್ನಿಹಿತವಾಗಿದೆ.
ಸುಮಾರು 300 ಕೋಟಿ ರೂ. ವೆಚ್ಚದ ಈ ಉದ್ದೇಶಿತ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಮಂಗಳವಾರ ಮೊದಲ ಹಂತದ ಇ ಟೆಂಡರ್ ಸಹ ಕರೆಯಲಾಗಿದೆ.
ಮಾ. 31 ರಿಂದ 45 ದಿನದ ಒಳಗಾಗಿ ಆಸಕ್ತರು ಟೆಂಡರ್ ಹಾಕಬೇಕಿದ್ದು, ಕಾಮಗಾರಿ ಪ್ರಾರಂಭಗೊಂಡ ದಿನದಿಂದ 2 ವರ್ಷಗಳಲ್ಲಿ ಫ್ಲೈಓವರ್ ಪೂರ್ಣಗೊಳ್ಳಲಿದೆ. ಟೆಂಡರ್ ಕರೆಯುವಂತೆ ಕೇಂದ್ರ ಸರ್ಕಾರ ಎರಡ್ಮೂರು ದಿನಗಳ ಹಿಂದೆಯಷ್ಟೇ ಸೂಚನೆ ನೀಡಿತ್ತು.
ಯೋಜನೆಯ ವಿವರ: 2016ರ ಮಾ. 31ರಂದು ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವಳಿ ನಗರದಲ್ಲಿ ಫ್ಲೈ ಓವರ್ ನಿರ್ವಣಕ್ಕೆ 300 ಕೋಟಿ ರೂ. ಮೊತ್ತದ ಡಿಪಿಆರ್ ಸಿದ್ಧಪಡಿಸುವಂತೆ ಸೂಚಿಸಿದ್ದರು. ಆದರೆ ಲೋಕೋಪಯೋಗಿ ಅಧಿಕಾರಿಗಳ ಮೀನಮೇಷದಿಂದಾಗಿ ಡಿಪಿಆರ್ ಸಲ್ಲಿಸುವುದು ತಡವಾಗಿತ್ತು. ಕೊನೆಗೂ ಮುಂಬೈನ ಸ್ಪ್ರೆಕ್ಟ್ರಂ ಟೆಕ್ನೊ ಕನ್ಸಲ್ಟನ್ಸಿ ಪ್ರೖೆ.ಲಿಮಿಟೆಡ್ ಕಂಪನಿ ಡಿಪಿಆರ್ ಸಿದ್ಧಪಡಿಸಲು ಸುಮಾರು 1.76 ಕೋಟಿ ರೂ. ಮೊತ್ತದ ಟೆಂಡರ್ ಪಡೆದು, ಸುಮಾರು 1,200 ಕೋಟಿ ರೂ. ಮೊತ್ತದ ಡಿಪಿಆರ್ನ್ನೂ ಸಿದ್ಧಪಡಿಸಿತ್ತು.
1,200 ಕೋಟಿ ರೂ.ಗಳ ಬದಲು ಸುಮಾರು 700-800 ಕೋಟಿ ರೂ.ಗಳ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, 315 ಕೋಟಿ ರೂ.ಗಳ ಡಿಪಿಆರ್ನ್ನು ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಹಾಗೂ ಇನ್ನುಳಿದ ಆರ್ಥಿಕ ನೆರವಿನ ಡಿಪಿಆರ್ನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆ ಮೂಲಕ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದ್ದರು.
ನಂತರ ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು 315 ಕೋಟಿ ರೂ.ಗಳ ಮೊದಲ ಹಂತದ ಡಿಪಿಆರ್ ಸಿದ್ಧಪಡಿಸಿ, ಕೇಂದ್ರ ಸಾರಿಗೆ ಇಲಾಖೆಗೆ ಸಲ್ಲಿಸಿದ್ದರು.
ಮೊದಲ ಹಂತದ ಯೋಜನೆಯ ಸಂಪೂರ್ಣ ಹಣವನ್ನು ಕೇಂದ್ರ ಸಾರಿಗೆ ಸಚಿವಾಲಯವೇ ನೀಡಲಿದೆ. 2ನೇ ಹಂತದ ಯೋಜನೆಯಡಿ ಕೇಂದ್ರ ಸರ್ಕಾರ ಶೇ. 60ರಷ್ಟು, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ತಲಾ ಶೇ. 20ರಷ್ಟು ಹಣಕಾಸು ಭರಿಸಬೇಕಿದೆ.
್ಞ ಇದೀಗ ಕರೆದಿರುವುದು ಮೊದಲ ಹಂತದ ಟೆಂಡರ್. ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ 3.65 ಕಿಮೀ ಉದ್ದದ ಫ್ಲೈ ಓವರ್ ನಿರ್ವಣಗೊಳ್ಳಲಿದೆ.* 209 ಕೋಟಿ ರೂ. ಮೊತ್ತದ ಸಿವಿಲ್ ಕಾಮಗಾರಿ * ಈ ಹಂತದಲ್ಲಿ ನಡೆಯಲಿದೆ. ಗದಗ ರಸ್ತೆ, ಹೊಸೂರು ವೃತ್ತದಿಂದ ಗೋಕುಲ ರಸ್ತೆ ಹಾಗೂ ವಿಜಯಪುರ ರಸ್ತೆಯ ದೇಸಾಯಿ ವೃತ್ತದ ಮೇಲ್ಸೇತುವೆವರೆಗೆ ಫ್ಲೈ ಓವರ್ ನಿರ್ವಣಗೊಳ್ಳಲಿದೆ.
ಟೆಂಡರ್ ಪ್ರಕ್ರಿಯೆ ಮುಗಿಸಿ ನಿವೃತ್ತಿ : ಅವಳಿ ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ಫ್ಲೈಓವರ್ಗಾಗಿ ಡಿಪಿಆರ್ ಸಿದ್ಧಪಡಿಸುವುದು ಸೇರಿದಂತೆ ಇತರ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದು ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎನ್.ಎಂ. ಕುಲಕರ್ಣಿ ಅವರು. ಮಾ. 31 ರಂದು ನಿವೃತ್ತಿ ಹೊಂದುವ ದಿನ. ಇದೇ ದಿನ ಫ್ಲೈ ಓವರ್ ಕಾಮಗಾರಿಯ ಪ್ರಥಮ ಹಂತದ ಇ -ಟೆಂಡರ್ ಕರೆಯುವ ಪ್ರಕ್ರಿಯೆ ಮುಗಿಸಿ, ಸೇವಾ ನಿವೃತ್ತಿ ಹೊಂದಿದ್ದಾರೆ. 2ನೇ ಹಂತದಲ್ಲಿ ಬಂಕಾಪುರ ಚೌಕ ರಸ್ತೆ ಮತ್ತು ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಫ್ಲೈ ಓವರ್ ನಿರ್ವಣಗೊಳ್ಳಲಿದೆ. ಈಗಾಗಲೇ ಮೊದಲ ಹಂತದ ಡಿಪಿಆರ್ನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಅದಕ್ಕೆ ಅನುಮತಿ ದೊರೆತ ನಂತರ 2ನೇ ಹಂತದ ಡಿಪಿಆರ್ ಸಿದ್ಧಪಡಿಸಲಾಗುವುದು. | ವಸಂತ ನಾಯಕ, ಸುಪ್ರಿಡೆಂಟ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ (ರಾಷ್ಟ್ರೀಯ ಹೆದ್ದಾರಿ)