

ಸಂತೋಷ ವೈದ್ಯ ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯ ಉದ್ದೇಶಿತ ಫ್ಲೈ ಓವರ್ (ಮೇಲ್ಸೇತುವೆ) ವಿಸ್ತರಣೆಗೆ ಅಗತ್ಯ ಬೀಳುವ ಹಣಕಾಸು ಕೊರತೆ ಸರಿದೂಗಿಸಲು ಹು-ಧಾ ಮಹಾನಗರ ಪಾಲಿಕೆಗೆ ತನ್ನ ಪಾಲಿನ ವಂತಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಈ ಕಾರಣಕ್ಕೆ ಅದು ತನ್ನ ಒಡೆತನದ ಆಸ್ತಿ ಹರಾಜು ಮಾಡಲು ಸಿದ್ಧತೆ ನಡೆಸಿದೆ.
ನವನಗರದಲ್ಲಿ 2004ರ ಪೂರ್ವ ಅಭಿವೃದ್ಧಿ ಪಡಿಸಿದ್ದ ನೂರಕ್ಕೂ ಅಧಿಕ ನಿವೇಶನಗಳಲ್ಲಿ 84 ಖಾಲಿ ಉಳಿದಿದ್ದವು. ಇವುಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು ಮಹಾನಗರ ಪಾಲಿಕೆಯು ಪ್ರಸ್ತಾವನೆಯೊಂದನ್ನು ಸಿದ್ಧಪಡಿಸುತ್ತಿದೆ. ಇವೆಲ್ಲ ತಲಾ 1200 ಚದರ ಅಡಿ ವಿಸ್ತೀರ್ಣದ (30 ಅಡಿ ಅಗಲ-40 ಅಡಿ ಉದ್ದ) ನಿವೇಶನಗಳಾಗಿದ್ದು, ಮಾರಾಟದಿಂದ ಒಟ್ಟು 30ರಿಂದ 40 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗುತ್ತಿದೆ. ಈ ಹಣವನ್ನು ಫ್ಲೈ ಓವರ್ ನಿರ್ವಣಕ್ಕೆ ತನ್ನ ಪಾಲಿನ ವಂತಿಗೆಯೆಂದು ಪಾಲಿಕೆ ನೀಡಲಿದೆ.
ಇದೇ ಮೊದಲು: ನವನಗರದಲ್ಲಿ ಐದಾರು ಕಡೆ ಪಾಲಿಕೆ ಒಡೆತನದ ಖಾಲಿ ಜಾಗವಿದೆ. ಇಲ್ಲಿ ನಿವೇಶನಗಳನ್ನು ರೂಪಿಸಿ ಮಾರಾಟ ಮಾಡಲು ಮುಂದಾದಾಗ ಅಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಹಾಗಾಗಿ, 84 ನಿವೇಶನಗಳು ಖಾಲಿ ಉಳಿದವು. ಬಳಿಕ ಮರು ಮಾರಾಟಕ್ಕೆ ಪಾಲಿಕೆ ಮುಂದಾಗಲಿಲ್ಲ. 2004ರ ನಂತರ ಹು-ಧಾ ಮಹಾನಗರ ಪಾಲಿಕೆಯು ಎಲ್ಲಿಯೂ ತನ್ನ ಆಸ್ತಿಯನ್ನು ನಿವೇಶನ ಮಾಡಿ ಮಾರಾಟ ಮಾಡಿಲ್ಲ.
ಪಾಲಿಕೆಯು ಈವರೆಗೆ ನಿರಂತರ ನೀರು, ಅಮೃತ ಯೋಜನೆಗಳಿಗೆ ತನ್ನ ಅನುದಾನದಲ್ಲಿಯೇ ವಂತಿಗೆಯನ್ನು ನೀಡಿದೆ. ಆಸ್ತಿ ಹರಾಜು ಮಾಡಿ ವಂತಿಗೆ ನೀಡಲು ಮುಂದಾಗಿರುವುದು ಇದೇ ಮೊದಲು. ಹುಬ್ಬಳ್ಳಿಯ ಹೃದಯ ಭಾಗ ಕಿತ್ತೂರು ಚನ್ನಮ್ಮ ವೃತ್ತವನ್ನು ಸಂರ್ಪಸುವ ಪ್ರಮುಖ ರಸ್ತೆಗಳಿಗೆ ಸಮಾನಾಂತರವಾಗಿ ಫ್ಲೈ ಓವರ್ ನಿರ್ವಣವಾಗಬೇಕೆಂಬುದು ದಶಕಗಳ ಹಿಂದಿನ ಬೇಡಿಕೆ. ಇತ್ತೀಚೆಗೆ ಅದಕ್ಕೆ ಮನ್ನಣೆ ಸಿಕ್ಕಿತು. ಜ. 15ರಂದು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನೀತಿನ ಗಡ್ಕರಿ ಅವರು ವರ್ಚುವಲ್ ವೇದಿಕೆಯಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಕೇಂದ್ರ ರಸ್ತೆ ನಿಧಿ (ಸಿಆರ್ಎಫ್) ಅನುದಾನದಡಿ ಕೇಂದ್ರ ಸರ್ಕಾರ 298 ಕೋಟಿ ರೂ. ಮಂಜೂರು ಮಾಡಲಾಗಿದೆ. ಈಗ ಮಂಜೂರಾಗಿರುವ ಅನುದಾನಕ್ಕೆ ಅನುಗುಣವಾಗಿ ಕಿತ್ತೂರು ಚನ್ನಮ್ಮ ವೃತ್ತದಿಂದ ಸ್ಟೇಶನ್ ರಸ್ತೆ ಅಂಬೇಡ್ಕರ್ ವೃತ್ತದವರೆಗೆ, ಕಿತ್ತೂರು ಚನ್ನಮ್ಮ ವೃತ್ತದಿಂದ ದೇಸಾಯಿ ವೃತ್ತದವರೆಗೆ ಹಾಗೂ ಕಿತ್ತೂರು ಚನ್ನಮ್ಮ ವೃತ್ತದಿಂದ ಹೊಸೂರು ವೃತ್ತ ದಾಟಿ ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೊಟೇಲ್ವರೆಗೆ ಫ್ಲೈ ಓವರ್ ನಿರ್ವಣವಾಗಲಿದೆ.
ಆದರೆ, ಬಂಕಾಪುರ ಚೌಕದಿಂದ ಕಿತ್ತೂರು ಚನ್ನಮ್ಮ ವೃತ್ತವನ್ನು ಸಂರ್ಪಸುವ ಪಿ.ಬಿ. ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣ ಬಿಟ್ಟು ಹೋಗಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಗೊಂಡಿದ್ದವು. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇತ್ತೀಚೆಗೆ ಜನಪ್ರತಿನಿಧಿಗಳ ಸಭೆ ನಡೆಸಿ ಪಿ.ಬಿ. ರಸ್ತೆಯಲ್ಲಿ ಫ್ಲೈ ಓವರ್ ನಿರ್ವಣಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದಕ್ಕೆ ಅಗತ್ಯ ಬೀಳುವ ಹಣವನ್ನು ರಾಜ್ಯ ಸರ್ಕಾರದ ಅನುದಾನದಿಂದ, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಮೂಲಕ ಹಾಗೂ ಮಹಾನಗರ ಪಾಲಿಕೆ ಮತ್ತು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಂತಿಗೆ ಪಡೆಯುವ ಮೂಲಕ ಸರಿದೂಗಿಸಲು ನಿರ್ಧರಿಸಲಾಗಿದೆ.
50 ಕೋಟಿ ರೂಪಾಯಿ ವಂತಿಗೆ: ಪಿ.ಬಿ. ರಸ್ತೆಯಲ್ಲಿ ಬಂಕಾಪುರ ಚೌಕದವರೆಗೆ ಫ್ಲೈ ಓವರ್ ನಿರ್ಮಾಣ ಮಾಡುವುದಾದಲ್ಲಿ 100 ಕೋಟಿ ರೂ. ಅಗತ್ಯ ಬೀಳಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಅರ್ಧ ಹಣ 50 ಕೋಟಿ ರೂ. ನೀಡಬೇಕು ಎಂದು ಪಾಲಿಕೆಗೆ ಸೂಚಿಸಲಾಗಿದೆ. ಮುಂದಿನ 50 ವರ್ಷಗಳ ವಾಹನ ಸಂಚಾರ ದಟ್ಟಣೆ ನೋಡುವುದಾದರೆ ಗಬ್ಬೂರ ವೃತ್ತದವರೆಗೆ ಫ್ಲೈ ಓವರ್ ನಿರ್ಮಾಣ ಮಾಡಬೇಕೆಂಬ ಆಗ್ರಹವೂ ಇದೆ. ಆಗ 200 ಕೋಟಿ ಗೂ ಹೆಚ್ಚು ಹಣ ಬೇಕಾಗಬಹುದು. ಈ ರೀತಿಯಾದರೆ ಪಾಲಿಕೆ ವಂತಿಗೆ ನೂರು ಕೋಟಿ ರೂ. ತಲುಪುತ್ತದೆ.
ಉದ್ದೇಶಿತ ಫ್ಲೈ ಓವರ್ ವಿಸ್ತರಣೆಗೆ ವಂತಿಗೆ ನೀಡಲು ನವನಗರದಲ್ಲಿರುವ ಪಾಲಿಕೆ ಒಡೆತನದ 84 ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು ಗುರುತಿಸಲಾಗಿದೆ. ಈ ನಿವೇಶನಗಳು ಬಹಳ ವರ್ಷಗಳಿಂದ ಖಾಲಿ ಬಿದ್ದಿವೆ. ಈ ಕುರಿತು ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಪಾಲಿಕೆ ಆಡಳಿತಾಧಿಕಾರಿಯಾದ ಪ್ರಾದೇಶಿಕ ಆಯುಕ್ತರಿಗೆ (ಬೆಳಗಾವಿ) ಕಳುಹಿಸಲಾಗುವುದು. | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು