ಮೈಸೂರು: ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಸೆ.20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶಿಂಡೇನಹಳ್ಳಿ ಡಾ. ಶರತ್‌ಕುಮಾರ್ ತಿಳಿಸಿದರು.
2006 ರ ಏಪ್ರಿಲ್ ಒಂದರ ನಂತರ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಎನ್‌ಪಿಎಸ್, ರಾಷ್ಟ್ರೀಯ ಪಿಂಚಣಿ ಯೋಜನೆ, ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಿ ಅನುದಾನಿತ ಸರ್ಕಾರಿ ನೌಕರರನ್ನು ಕೈಬಿಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿವಿಧ ಸಂಘಟನೆಗಳು ಹತ್ತಾರು ವರ್ಷಗಳಿಂದ ಹೋರಾಟ, ಸತ್ಯಾಗ್ರಹ ನಡೆಸಿದಾಗ ಸರ್ಕಾರ, ಪಿಂಚಣಿ ಜಾರಿ ಆಶ್ವಾಸನೆ ನೀಡಿದ್ದರೂ ಇನ್ನೂ ಈಡೇರಿಸಿಲ್ಲ. ಇದರಿಂದ ಸಾವಿರಾರು ಅನುದಾನಿತ ನೌಕರರು ನಿವೃತ್ತಿ ಬಳಿಕ ಯಾವುದೇ ಪಿಂಚಣಿ ಸೌಲಭ್ಯವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಿವೃತ್ತಿ ಬಳಿಕ ಬಹಳಷ್ಟು ಜನ ಜೀವನ ನಿರ್ವಹಣೆಗಾಗಿ ಕೈಗಾರಿಕೆ, ಬ್ಯಾಂಕ್, ಮಾಲ್, ಶಾಲಾ ಕಾಲೇಜುಗಳಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಬೇಕಾಗಿ ಬಂದಿದೆ ಎಂದು ಅಳಲು ತೋಡಿಕೊಂಡರು.
ಈ ಹಿಂದೆ ನ್ಯಾಯಾಲಯದ ಮೊರೆ ಹೋದಾಗ ಹೈಕೋರ್ಟ್, ಸುಪ್ರೀಂ ಕೋರ್ಟ್ ಅನುದಾನಿತ ನೌಕರರಿಗೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ನಿರ್ದೇಶನ ನೀಡಿದೆ. ಆದರೂ ಈ ಆದೇಶ ಜಾರಿಗೊಳಿಸಿಲ್ಲ. ಹೀಗಾಗಿ ಈಗ ಮತ್ತೆ ಹೋರಾಟ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 30 ಸಾವಿರ ಪಿಂಚಣಿ ವಂಚಿತರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಮೂರು ಸಾವಿರ ಜನರ ತೆರಳಲಿದ್ದೇವೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಬಿ.ಸಿದ್ದರಾಮ, ಎಂ.ಎಂ.ದಿನೇಶ್, ಎಸ್.ಎಲ್.ಚಂದ್ರಶೇಖರ್ ಇದ್ದರು.