ಫೈನಾನ್ಸ್ ಸಂಸ್ಥೆಯ ವಿರುದ್ಧ ರೈತರ ಪ್ರತಿಭಟನೆ

3
Published on

ಮೈಸೂರು: ಯಾವುದೇ ನೋಟಿಸ್ ನೀಡದೆ ಹಿಂದೂಜಾ ಫೈನಾನ್ಸ್ ಸಂಸ್ಥೆಯು ಟಿಪ್ಪರ್ ಅನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.


ದೊಡ್ಡಗಡಿಯಾರ ಬಳಿ ಇರುವ ಸಂಸ್ಥೆಯ ಕಚೇರಿ ಎದುರು ಜಮಾವಣೆಗೊಂಡ ರೈತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂಜಾ ಫೈನಾನ್ಸ್ ಸಂಸ್ಥೆ ವತಿಯಿಂದ ಸಾಲ ಪಡೆದುಕೊಂಡು 2016ರಲ್ಲಿ ಟಿಪ್ಪರ್ ಖರೀದಿ ಮಾಡಲಾಗಿದೆ. ವೈಯಕ್ತಿಕ ಕಾರಣಗಳಿಂದ ಟಿಪ್ಪರ್ ಮಾಲೀಕ 2017ರಲ್ಲಿ ಕ್ಯಾತಘಟ್ಟ ಗ್ರಾಮದ ಶರತ್ ಎಂಬುವರಿಗೆ ಅದನ್ನು ಮಾರಾಟ ಮಾಡಿದ್ದಾರೆ. ಬಳಿಕ ಶರತ್ ಎರಡು ಕಂತು ಬಾಕಿ ಉಳಿಸಿಕೊಂಡಿದ್ದರು. ಇಷ್ಟಕ್ಕೆ ಹಿಂದೂಜಾ ಸಂಸ್ಥೆಯ ಮ್ಯಾನೇಜರ್, ಶರತ್ ಅವರಿಗೆ ಕರೆ ಮಾಡಿ ಪುಸಲಾಯಿಸಿ ಟಿಪ್ಪರ್ ಅನ್ನು ತರಿಸಿಕೊಂಡು ಜಪ್ತಿ ಮಾಡಿದ್ದಾರೆ ಎಂದು ದೂರಿದರು.


ಯಾವುದೇ ಮಾಹಿತಿ ನೀಡದೆ ವಾಹನವನ್ನು ಹರಾಜು ಮಾಡಲಾಗಿದೆ. ಈ ವಿಷಯ ಗಮನಕ್ಕೆ ಬಂದಾಗ ಮೂಲ ಮಾಲೀಕರು ಶಾಖೆಯನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆಗ ಅಲ್ಲಿಯ ಸಿಬ್ಬಂದಿ, ಟಿಪ್ಪರ್ ಅನ್ನು 12 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ನಿಮ್ಮ ಸಾಲ ಸಹ ವಜಾಗೊಂಡಿದೆ ಎಂದು ತಿಳಿಸಿರುತ್ತಾರೆ. ಆದರೆ 5 ವರ್ಷಗಳಾದರೂ ಅದರ ಎನ್‌ಒಸಿ ನೀಡಿಲ್ಲ. ಬದಲಿಗೆ ಮತ್ತೆ 6 ಲಕ್ಷ ರೂ. ಸಾಲ ಪಾವತಿ ಮಾಡುವಂತೆ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿದರು.


ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಹೇಶ್, ಗೋವಿಂದರಾಜು, ಮಹೇಶ್, ಕಿರಣ್‌ಕುಮಾರ್, ಗುರುಸ್ವಾಮಿ, ಸೋಮಶೇಖರ್, ಪ್ರಸನ್ನ, ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net