

ಹಾಸನ: ಸಾಲ ನೀಡಿದ್ದವರ ಕಿರುಕುಳ ತಾಳಲಾರದೇ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ಗೆ ಹಣ ಕಟ್ಟಿಸಿ ಮೋಸ ಮಾಡಿದ್ದರಿಂದ ಮನನೊಂದು ವಿಷ ಸೇವಿಸಿ ಅವಿವಾಹಿತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಅಟ್ಟಾವರ ಗ್ರಾಮದ ಸ್ವರೂಪ್(40) ಮೃತ.
ಈತ ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಅಂದಿನಿಂದ ಮನೆಯಲ್ಲೇ ಇದ್ದ. ಮಾ.27 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಸ್ವರೂಪ್, ಮನೆಯ ಬಾತ್ ರೂಂ ನಲ್ಲಿ ವಿಷ ಸೇವನೆ ಮಾಡಿದ್ದ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದ.
ಮನೆಯವರು ಮೃತನ ಅಂಗಿಯ ಜೇಬು ಪರಿಶೀಲಿಸಿದಾಗ ಎರಡು ಚೀಟಿಗಳಿದ್ದವು. ಅದರಲ್ಲಿ ಒಂದು ಹೀರೋ ಫಿನ್ ಕಾರ್ಪ್‌ನಲ್ಲಿ ಸ್ವರೂಪ್ ತನ್ನ ಸ್ವಂತಕ್ಕೆ ಸಾಲ ತೆಗೆದುಕೊಂಡಿದ್ದಾಗಿತ್ತು. ಫೈನಾನ್ಸ್‌ನವರು ಪದೇಪದೆ ಹಣ ಕಟ್ಟುವಂತೆ ಕಿರುಕುಳ ಕೊಡುತ್ತಿದ್ದರು. ಮತ್ತೊಂದು ಅಪಘಾತ ನಂತರ ಬಂದ ಪರಿಹಾರದ ಹಣವನ್ನು ಬೆಂಗಳೂರಿನ ಲಕ್ಷ್ಮೀ ರೋಡ್ ಟ್ರಾನ್ಸ್‌ಪೋರ್ಟ್‌ನಲ್ಲಿ ಕೆಲಸ ಮಾಡುವ ಅನ್ಸಾರ್, ತಿಪ್ಪೇಸ್ವಾಮಿ, ಬಾಳಪ್ಪ ಎಂಬುವರು ಕ್ರಿಕೆಟ್ ಬೆಟ್ಟಿಂಗ್‌ಗೆ ಹಣ ಕಟ್ಟಿಸಿ ಮೋಸ ಮಾಡಿದ್ದಾರೆ ಎಂದು ಬರೆದಿದ್ದ. ಸ್ವರೂಪ್ ಸಾವಿಗೆ ಕಾರಣರಾದ ಫೈನಾನ್ಸ್ ಹಾಗೂ ಬೆಟ್ಟಿಂಗ್ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮೃತನ ಸಂಬಂಧಿಕರು ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.