

ಧಾರವಾಡ: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು 2021-22ನೇ ಸಾಲಿನಲ್ಲಿ ನೀಡುವ ಕಿರಿಯ ಫೆಲೋಶಿಪ್ ಅವಾರ್ಡ್‌ಗೆ ನಗರದ ಜೆಎಸ್‌ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ, ಪರಿಸರವಾದಿ ಡಾ. ಶಿವಾನಂದ ಟವಳಿ ಆಯ್ಕೆಯಾಗಿದ್ದಾರೆ.
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನೀಡುವ ಅವಾರ್ಡ್‌ಗೆ ಒಟ್ಟು 2.40 ಲಕ್ಷ ರೂ. ಫೆಲೋಶಿಪ್ ಮೊತ್ತವಿದ್ದು, 2021-22ನೇ ಸಾಲಿನ ಸಾಹಿತ್ಯ ಕ್ಷೇತ್ರದಲ್ಲಿ ಆಯ್ಕೆಯಾದ ಏಕೈಕ ಕನ್ನಡಿಗ ಇವರಾಗಿದ್ದಾರೆ.
ಡಾ. ಶಿವಾನಂದ ಟವಳಿ ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದವರು. ‘ಗ್ರಾಮೀಣ ಬದುಕು ಮತ್ತು ಜಾನಪದ’, ‘ಕನ್ನಡ ವ್ಯಾಕರಣ ದರ್ಪಣ’, ‘ಜನಪದ ಸಂಸ್ಕೃತಿ’, ಕನ್ನಡ ಜನಪದ ಗೀತೆಗಳಲ್ಲಿ ಸಂಬಂಧಗಳು ಸೇರಿ ಒಟ್ಟು 28 ಕೃತಿಗಳನ್ನು ಹೊರತಂದಿದ್ದಾರೆ. ರಾಷ್ಟ್ರಮಟ್ಟದ ಗೌರವಕ್ಕೆ ಭಾಜನರಾದ ಡಾ. ಶಿವಾನಂದ ಟವಳಿ ಅವರನ್ನು ಜೆಎಸ್‌ಎಸ್ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಪ್ರಾಚಾರ್ಯ ಭಾರತಿ ಶಾನಭಾಗ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.