

ಹುಬ್ಬಳ್ಳಿ: ಬಿಜೆಪಿಯವರು ತುಂಬಾ ಅರ್ಜೆಂಟ್ನಲ್ಲಿ ಇದ್ದಾರೆ. ರಾಜ್ಯ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಸಲು ತಯಾರಿ ನಡೆಸಿದ್ದಾರೆ. ಯಾವಾಗ ಚುನಾವಣೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯವರು ಎಲ್ಲದಕ್ಕೂ ತುಂಬಾ ಅರ್ಜೆಂಟ್ ಮಾಡುತ್ತಿದ್ದಾರೆ. ಮುಂಚಿತವಾಗಿ ಚುನಾವಣೆ ನಡೆಸುವ ಕುರಿತು ಪ್ರಧಾನ ಮಂತ್ರಿ ಕಚೇರಿಯವರೆಗೂ ಚರ್ಚೆ ನಡೆದಿರುವ ಕುರಿತು ಮಾಹಿತಿ ಇದೆ ಎಂದರು.
ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಬಗ್ಗೆ ನನಗೆ ವೈಜ್ಞಾನಿಕ ಮಾಹಿತಿ ಇಲ್ಲ. ಆದರೆ ಕೇಂದ್ರ ಸರ್ಕಾರ ಕೋವಿಡ್ ನೆಪ ಮಾಡಿಕೊಂಡು ರಾಹುಲ ಗಾಂಧಿ ಅವರ ಅವರ ಭಾರತ ಜೋಡೋ ಯಾತ್ರೆಯನ್ನು ತಡೆಯುವ ಉದ್ದೇಶ ಹೊಂದಿದೆ. ಈಗಾಗಲೇ ರಾಹುಲ್ ಅವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ. ನಾವು ಮೇಕೆದಾಟು ಯೋಜನೆಗಾಗಿ ಹೋರಾಟ ನಡೆಸಿದ್ದಾಗ ಕೋವಿಡ್ ನೆಪವೊಡ್ಡಿ ನಮ್ಮನ್ನು ತಡೆದಿದ್ದರು. 4-5 ಕೇಸ್ ಹಾಕಿದ್ದರು. ಅದೇ ರೀತಿ ರಾಹುಲ್ ಗಾಂಧಿ ಅವರ ಯಾತ್ರೆಗೆ ಯಾರೂ ಹೋಗಬಾರದು ಎಂದು ಪ್ರಚಾರ ಮಾಡಲು ಹೊರಟಿದ್ದಾರೆ ಎಂದರು.