

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿಗೆ ಬರ ಸಂಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಫೆಬ್ರವರಿ ೧೦, ೧೧ ಹಾಗೂ ೧೨ ರಂದು ಮೂರು ದಿನಗಳ ಕಾಲ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ಎನ್.ಕೆ.ಹೆಗಡೆ ಹೇಳಿದರು.
ಇಲ್ಲಿನ ತೋವಿವಿಯ ವಿಸ್ತರಣಾ ನಿರ್ದೇಶನಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತೋಟಗಾರಿಕೆ ಮೇಳವು ರೈತರಲ್ಲಿ ಅಪೇಕ್ಷಿತ ಧನಾತ್ಮಕ ಬದಲಾವಣೆ ತರುವ ಅವಕಾಶವನ್ನು ಒದಗಿಸುತ್ತಿದ್ದು, ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯಗಳೊಂದಿಗೆ ತೋಟಗಾರಿಕೆ ಮೇಳ ಆಚರಿಸುತ್ತಾ ಬರಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ವಿಶ್ವ ವಿದ್ಯಾಲಯದ ವ್ಯಾಪ್ತಿಯ ೨೪ ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಫಲಶ್ರೇಷ್ಠರನ್ನು ಸನ್ಮಾನಿಸಲಾಗುತ್ತಿದೆ. ಮೇಳದಲ್ಲಿ ಪರಸ್ಪರ, ಗುಂಪು ಮತ್ತು ಸಮೂಹ ಎಂಬ ಸಂವಹನದ ಮೂರು ಪ್ರಕಾರಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದ ತಂತ್ರಜ್ಞಾನ ಅಳವಡಿಕೆಗೆ ಪ್ರೋತ್ಸಾಹಿಸಿದಂತಾಗುತ್ತದೆ. ಆದ್ದರಿಂದ ತೋಟಗಾರಿಕೆ ಮೇಳವು ತಂತ್ರಜ್ಞಾನ ಪ್ರಸಾರದ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ ಎಂದರು.
ಪ್ರತಿ ವರ್ಷ ಒಂದೇ ಸೂರಿನಡಿ ರೈತ ಸಮುದಾಯಕ್ಕೆ ನವೀನ, ಸಮಯೋಜಿಕ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲು ತೋಟಗಾರಿಕೆ ಮೇಳವನ್ನು ಆಯೋಜಿಸುತ್ತಿದ್ದು, ಮೇಳದ ಯೋಜನೆ ಮುಖಾಂತರ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶಗಳಲ್ಲೊಂದಾದ ತಂತ್ರಜ್ಞಾನದ ವರ್ಗಾವಣೆಯು ಯಶಸ್ವಿಯಾಗುತ್ತಿದೆ. ತೋಟಗಾರಿಕೆಯ ತರಕಾರಿ ಬೆಳೆಗಳ, ಹೂವಿನ, ಹಣ್ಣಿನ ವಿವಿಧ ತಳಿಗಳ, ಕೊಯ್ಲೋತ್ತರ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ, ಕ್ಷೇತ್ರ ಭೇಟಿ, ಪ್ರಾತ್ಯಕ್ಷಿಕೆ, ವಿಡಿಯೋ ಮುಂತಾದವುಗಳ ಮೂಲಕ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತಿದೆ. ಮೇಳದಲ್ಲಿ ೨೦೦ ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತಿದೆ ಎಂದರು.
ಸಮಗ್ರ ಕೃಷಿ ಪದ್ಧತಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯು ದೊರೆಯುತ್ತದೆ. ವಿಜ್ಞಾನಿಗಳು, ಪ್ರಗತಿಪರ ರೈತ, ಉದ್ಯಮಿಗಳು ಮುಂತಾದವರನ್ನು ನೇರವಾಗಿ ಭೇಟಿಯಾಗಿ ಅವರ ಯಶೋಗಾಥೆಗಳಿಂದ ಪ್ರೇರಣೆ ಪಡೆಯುವದಲ್ಲದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಪ್ರತಿ ದಿನವೂ ಸಾಧಕ ರೈತರು ತಮ್ಮ ಅನುಭವವನ್ನು ಇತರೆ ರೈತರಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ಇತರೆ ರೈತರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಲಕ್ಷಿ÷್ಮÃನಾರಾಯಣ ಹೆಗಡೆ ಮಾತನಾಡಿ, ಈ ಬಾರಿ ಮೇಳದಲ್ಲಿ ನೀರು ಸಂರಕ್ಷಣೆ, ಹನಿ ನೀರಾವರಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ೨೬ ತಳಿಯ ದ್ರಾಕ್ಷಿ ಬೆಳೆಯ ಪ್ರದರ್ಶನ ಮತ್ತು ಮಾರಾಟ ಸಹ ಏರ್ಪಡಿಸಲಾಗುತ್ತಿದೆ. ರೈತರಿಗೆ ಸುಲಭವಾಗಿ ತೋಟಗಾರಿಕೆ ಬೆಳೆಗಳ ಉತ್ಪಾದನೆಯ ಬಗ್ಗೆ ಮಾಹಿತಿ ಸಿಗುವ ಸಲುವಾಗಿ ಹಾರ್ಟಿ ಆ್ಯಪ್ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ತೋವಿವಿಯ ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ.ಮಹೇಶ್ವರಪ್ಪ ಮಾತನಾಡಿ, ಕೊಯ್ಲೋತ್ತರ ತಂತ್ರಜ್ಞಾನದಡಿ ಬೇಲದ ಹಣ್ಣಿನ ಬಾರ್ ತಯಾರಿಕೆ ಮತ್ತು ಸಂರಕ್ಷಣೆ, ರಸ ಮತ್ತು ಪಾನೀಯಗಳಾಗಿ ಸಂಸ್ಕರಿಸಲು ವೈನ್ ದ್ರಾಕ್ಷಿ ತಳಿಗಳ ಸೂಕ್ತತೆ, ವೆಸ್ಟ್ ಇಂಡಿಯನ್ ಚರ‍್ರಿಯ ರಸ ಮತ್ತು ಸ್ಕಾ÷್ವಷ್ ಸಂರಕ್ಷಣೆಗಾಗಿ ಪ್ರೋಟೋಕಾಲ್ ಅಭಿವೃದ್ದಿ, ಜರ್ವೆರಾ ಮತ್ತು ಕಾರ್ನೆಶನ್‌ನಲ್ಲಿ ಮೌಲ್ಯವರ್ಧನೆಗೆ ಟಿಂಟಿಂಗ್ ತಂತ್ರಗಳ ಪ್ರಮಾಣಿಕರಣ, ಆರೋಗ್ಯಕರ ನೋನಿ ಕೋಕಮ್ ಮಿಶ್ರೀತ್ ಸಿದ್ದ ಪಾನಿಯ ಅಭಿವೃದ್ಧಿ, ಅಂಬಲಿ ಹಲಸು ತಿರುಳಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.
ತೋಟಗಾರಿಕೆ ವಿವಿಯ ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ, ತೋಟಗಾರಿಕೆ ವಿವಿಯ ಡೀನ್ ಸ್ನಾತಕೋತ್ತರ ರವೀಂದ್ರ ಮುಲಗೆ, ವಿಶ್ವವಿದ್ಯಾಲಯದ ಡೀನ್ ಬಾಲಾಜಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.