ಫೆ.6ರಿಂದ ಮದ್ದೂರಿನಿಂದ ಬೆಂಗಳೂರಿಗೆ ಪಾದಯಾತ್ರೆ

02M.D.R.2
Published on

ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.6ರಿಂದ ಕೃಷಿ ಕೂಲಿಕಾರರ ಸಂಘದ ವತಿಯಿಂದ ಮದ್ದೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಕೃಷಿ ಕೂಲಿಕಾರರ ಕಲ್ಯಾಣ ಮಂಡಳಿ ಸ್ಥಾಪನೆ, ಉದ್ಯೋಗ ಖಾತ್ರಿ ಯೋಜನೆ ಅಡಿ 600 ರೂ. ಕೂಲಿ ನಿಗದಿ, ವಿದ್ಯುತ್ ಖಾಸಗೀಕರಣ ಕೈಬಿಟ್ಟು ಭಾಗ್ಯಜ್ಯೋತಿ, ಕುಟೀರ ಜ್ಯೋತಿಗಳಿಗೆ ವಿದ್ಯುತ್ ಸಂಪರ್ಕ ಪಡೆದ ಮನೆಗಳಿಗೆ 100 ಯೂನಿಟ್ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಸೌಭಾಗ್ಯ, ದೀನದಯಾಳ್, ಬೆಳಕು ಯೋಜನೆಗಳಿಗೂ ಉಚಿತ ವಿದ್ಯುತ್ ಒದಗಿಸಬೇಕು. ಜಲಜೀವನ್ ಯೋಜನೆಯಲ್ಲಿ ಮೀಟರ್ ಅಳವಡಿಕೆ ಕೈಬಿಡಬೇಕು. ಎಲ್ಲ ಬಡವರಿಗೂ 2 ಲಕ್ಷ ರೂ.ಗಳ ವರೆಗೆ ಸಾಲ ನೀಡಬೇಕೆಂಬ ಹಲವು ಬೇಡಿಕೆಗಳಿವೆ ಎಂದರು.


ಹಲವು ವರ್ಷಗಳಿಂದ ಬಗೆಹರಿಯದೆ ಕಗ್ಗಂಟಾಗಿರುವ ಮನೆ ನಿವೇಶನ, ಸ್ಮಶಾನ, ಬಗರ್‌ಹುಕುಂ ಭೂಮಿ ಸಮಸ್ಯೆಗಳು ಬಗೆಹರಿಯಬೇಕಿದೆ. ಉದ್ಯೋಗ ಖಾತ್ರಿಯಡಿ ಕಡಿತ ಮಾಡಿರುವ ಸಲಕರಣ ವೆಚ್ಚ 10 ರೂ.ಗಳನ್ನು ನೀಡಬೇಕು. 8ನೇ ತರಗತಿಯ ನಿಯಮವನ್ನು ಕಾಯಕ ಬಂಧುಗಳಿಗೆ ವಿಧಿಸಬಾರದು ಎಂದರು.


ಫೆಬ್ರವರಿ 6ರ ಸೋಮವಾರ 11 ಗಂಟೆಗೆ ಐತಿಹಾಸಿಕ ಶಿವಪುರ ಸತ್ಯಾಗ್ರಹ ಸೌಧದಿಂದ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು. ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಪಾದಯಾತ್ರೆಗೆ ಚಾಲನೆ ನೀಡುವರು.


ಸಿ.ಪಿ.ಐ.ಎಂ.ನ ಜಿ.ಎನ್.ನಾಗರಾಜ್, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಸಿ.ಪಿ.ಐ(ಎಂ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣಗೌಡ, ನಿತ್ಯಾನಂದಸ್ವಾಮಿ, ಚಂದ್ರಪ್ಪ ಹಾಗೂ ಹಲವಾರು ಸಂಘಟನೆಯ ಮತ್ತು ಪ್ರಗತಿಪರ ಮುಖಂಡರು ಪಾಲ್ಗೊಳ್ಳುವರು. ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವೆಂಕಟ್ ಸೇರಿದಂತೆ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಸಭೆಯಲ್ಲಿ ಎಂ.ಸಿ.ಬಸವರಾಜು, ಕ್ರಾಂತಿ ಸಿಂಹ, ಶ್ರೀಕ ಶ್ರೀನಿವಾಸ, ಕೆ.ಟಿ.ಶಿವಕುಮಾರ್, ನಳಿನಿ ಬಿ.ಆನಂದ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net