ಫೆ.5ರಿಂದ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿ

30Jaggu2
ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಕಿವಡಸಣ್ಣವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಿವಕುಮಾರ ಹಲ್ಯಾಳ, ದೀಪಾ ಈಟಿ, ತೌಸೀಫ್ ಕುಂದನಾಯ್ಕ ಇದ್ದರು.
Published on

ಬೆಳಗಾವಿ: ಆಟೊ ನಗರದಲ್ಲಿರುವ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಫೆ. 5ರಿಂದ 9ರೆವರೆಗೆ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, 27 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಹಾಗೂ ರೈಲ್ವೇಸ್ ತಂಡದ ಆಟಗಾರರು ಭಾಗವಹಿಸುವರು ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಕಿವಡಸಣ್ಣವರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಏಳು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಆ ಪೈಕಿ ಬಿ ಗುಂಪಿನ ಲೀಗ್ ಹಂತದ 10 ಪಂದ್ಯಗಳನ್ನು ಬೆಳಗಾವಿಯಲ್ಲಿ ಅಯೋಜಿಸಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ತಂಡಗಳು ಪಾಲ್ಗೊಳ್ಳಲಿವೆ ಎಂದರು. ಇಂಡಸ್ ಇಂಡ್ ಬ್ಯಾಂಕ್ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿದೆ. ಆಟಗಾರರಿಗೆ ಉತ್ತಮ ಹೋಟೆಲ್‌ನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಟೂರ್ನಿಗೆ ನಾಗೇಶ ಟ್ರೋಫಿ ಎಂದು ಹೆಸರಿಡಲಾಗಿದೆ ಎಂದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ಶಾಖೆ ಮುಖ್ಯಸ್ಥ ಎಂ.ಜಿ. ಅರುಣಕುಮಾರ್ ಮಾತನಾಡಿ, ಈ ಟೂರ್ನಿಗೆ ತಗುಲುವ ವೆಚ್ಚದ ಶೇ. 50 ಮೊತ್ತವನ್ನು ಇಂಡಸ್‌ಇಂಡ್ ಬ್ಯಾಂಕ್ ಭರಿಸಲಿದೆ.
ದಾನಿಗಳ ನೆರವಿನಿಂದ ಉಳಿದ ವೆಚ್ಚ ಭರಿಸಲಿದ್ದೇವೆ. ಹೀಗಾಗಿ, ನಗರದ ಸಂಘ-ಸಂಸ್ಥೆಗಳು ನೆರವಾಗಬೇಕು ಎಂದು ಕೋರಿದರು. ಶಿವಕುಮಾರ ಹಲ್ಯಾಳ, ದೀಪಾ ಈಟಿ, ತೌಸೀಫ್ ಕುಂದನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net