

ಹಾಸನ: ನುಡಿದಂತೆ ನಡೆಯದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ.3ರಿಂದ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಎಐಟಿಯುಸಿ ಆಶ್ರಯದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್.ಎನ್. ಜಯಲಕ್ಷ್ಮೀ ತಿಳಿಸಿದರು.
ಪ್ರಸಕ್ತ ಬಜೆಟ್‌ನಲ್ಲೇ ಪ್ರಿಯಾಂಕಾ ಗಾಂಧಿ ಘೋಷಿಸಿದ 6ನೇ ಗ್ಯಾರಂಟಿಯಂತೆ ಗೌರವಧನ ಹೆಚ್ಚಿಸಬೇಕು. ರಾಜ್ಯದಲ್ಲಿ 1.40 ಲಕ್ಷ ಸೇರಿ, ದೇಶದಲ್ಲಿ 28 ಲಕ್ಷದಷ್ಟು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ದೀನ-ದುರ್ಬಲ ವರ್ಗದ, ಮಕ್ಕಳ ಪೌಷ್ಟಿಕ ಆಹಾರ, ಲಾಲನೆ-ಪಾಲನೆ, ಆರೋಗ್ಯ, ಶಾಲಾಪೂರ್ವ ಶಿಕ್ಷಣ ನೀಡುವುದು ಸೇರಿದಂತೆ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಕೆ ಹಾಗೂ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಆದರೆ ನಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾರ್ಯಾಧ್ಯಕ್ಷರಾದ ಲೀನಾ ಡಯಾಸ್ ಮಾತನಾಡಿ, ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಗೊಳಿಸಿ ಸರ್ಕಾರ ಜಾರಿಗೊಳಿಸಬೇಕು ಎಂದು ತೀರ್ಪು ನೀಡಿದೆ. ನಮ್ಮ ಸರ್ಕಾರ ಹಿಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಹಾಗೂ ಪ್ರಿಯಾಂಕಾ ಗಾಂಧಿ ಅವರು ಘೋಷಣೆ ಮಾಡಿದ್ದ 6ನೇ ಗ್ಯಾರಂಟಿ ಪ್ರಕಾರ, ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಸಹಾಯಕಿಯರಿಗೆ 10 ಸಾವಿರ ರೂ. ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.
ಹಾಗೆಯೇ 2022 ರ ಸುಪ್ರೀಂ ಕೋರ್ಟಿ ತೀರ್ಪಿನಂತೆ ನಿವೃತ್ತರಾದ ಎಲ್ಲ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾೃಚುಟಿ ಕೊಡಬೇಕು. ನಮ್ಮನ್ನೂ ನೌಕರರೆಂದು ಪರಿಗಣಿಸಿ, ಗೌರವಧನ ಬದಲಾಗಿ ವೇತನ ಅಥವಾ ಸಂಬಳ ಎನ್ನಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳನ್ನು ಹಲವು ವರ್ಷಗಳಿಂದ ಭರ್ತಿ ಮಾಡಿಲ್ಲ. ಇದರಿಂದ ಇರುವವರಿಗೆ ಎರಡೆರಡು ಕಡೆ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಪಿ.ಡಿ.ನಾಗರತ್ನಾ ಇದ್ದರು.