

ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ), ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್) ಬಳಕೆ ಕುರಿತು 2024ರ ಫೆ. 28ರವರೆಗೂ ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದರು.
ಎಸಿ ಕಚೇರಿಯಲ್ಲಿ ಇವಿಎಂ, ವಿವಿ ಪ್ಯಾಟ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ, ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡ ನಂತರ ಮಾತನಾಡಿದರು.
ಜಿಲ್ಲೆಯ 1,661 ಮತಗಟ್ಟೆ ವ್ಯಾಪ್ತಿಯ 1,206 ಸ್ಥಳಗಳಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಮತದಾರರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ನಡೆಯುವ ಪ್ರಾತ್ಯಕ್ಷಿಕೆ ವೇಳೆ ಅಣಕು ಮತ ಚಲಾಯಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಖಾತ್ರಿ ಪಡಿಸಿಕೊಳ್ಳುವ ಮೂಲಕ ಸದುಪಯೋಗಕ್ಕೆ ಮುಂದಾಗಬೇಕು ಎಂದರು.
ಅಭಿಯಾನಕ್ಕಾಗಿ 13 ಮೊಬೈಲ್ ವಾಹನ, 152 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 175, ಮೊಳಕಾಲ್ಮುರು-207, ಚಳ್ಳಕೆರೆ-180, ಹಿರಿಯೂರು-203, ಹೊಸದುರ್ಗ-195, ಹೊಳಲ್ಕೆರೆ ಕ್ಷೇತ್ರದ 246 ಕಡೆ ಅಣಕು ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ನಾಗವೇಣಿ, ಚುನಾವಣಾ ಶಿರಸ್ತೆದಾರ್ ಮಲ್ಲಿಕಾರ್ಜುನ್ ಇತರರಿದ್ದರು.