ಫೆ.27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ

Published on

ಹಾಸನ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನು ಫೆ.27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಜಿಲ್ಲಾ ಅಧ್ಯಕ್ಷ ಈ.ಕೃಷ್ಣೇಗೌಡ ಮನವಿ ಮಾಡಿದರು.
ಈ ಸಮ್ಮೇಳದಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿ, 7ನೆ ವೇತನ ಆಯೋಗದ ವರದಿ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೈಲಾ ಪ್ರಕಾರವೇ ತಾನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಅವರೊಂದಿಗೆ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಒಪ್ಪಂವಾಗಿಲ್ಲ, ತಾನು 2009 ರಿಂದ 2104ನೇ ಸಾಲಿನನ ಅವಧಿವರೆಗೆ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ. ಕಳೆದ 4 ವರ್ಷ 6 ತಿಂಗಳ ಅವಧಿಯಲ್ಲಿ ಬೈಲಾ ನಿಯಮಾನುಸಾರ ಸಂಘದ 33 ಸಭೆಯನ್ನು ನಡೆಸಿ ನಾಲ್ಕು ಆಡಿಟ್ ಮಾಡಿಸಿ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡಿಸಿ, ಕೇಂದ್ರ ಸಂಘದ ಅನುಮೋದನೆ ಪಡೆಯಲಾಗಿದೆ. ಹೀಗಿದ್ದರೂ ಕೆಲವರು ನನ್ನ ಉತ್ತಮ ಕೆಲಸಗಳಿಗೆ ಮಸಿ ಬಳೆಯಲು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ಅವಧಿಯಲ್ಲಿ 5 ಸಾವಿರ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಾಲ್ಕು ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಂಘದ ಬ್ಯಾಂಕ್ ಖಾತೆಯಲ್ಲಿ ಕೇವಲ 5 ಸಾವಿರರೂ. ಹಣವಿತ್ತು. ಪ್ರಸ್ತುತ ಸಂಘದ ಖಾತೆಯಲ್ಲಿ 7.15 ಲಕ್ಷರೂ. ಉಳಿಸಿ ಆರ್ಥಿಕ ನೀತಿಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಿದ್ದೇನೆ. ಯಾವುದೇ ರೀತಿಯಲ್ಲೂ ಹಣ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಹೇಳಿದ ಅವರು, ಸರ್ಕಾರಿ ನೌಕರರು-ಅಧಿಕಾರಿಗಳ ಕುಂದುಕೊರತೆ ಬಗ್ಗೆ ಸ್ವೀಕೃತಗೊಂಡ 5 ಸಾವಿರಕ್ಕೂ ಹೆಚ್ಚು ಮನವಿಯನ್ನು ರಾಜ್ಯಧ್ಯಕ್ಷರಿಗೆ, ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಪರಿಹರಿಸಬಹುದಾದ ಸಮಸ್ಯೆಯನ್ನು ಇಲ್ಲಿಯೇ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಫೆ.13 ರಂದು ನಡೆದ ಸಭೆಗೆ ಕೋರಂ ಕೊರತೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಅಂದಿನ ಸಭೆಗೆ 30 ಸದಸ್ಯರು ಹಾಜರಾಗಿದ್ದರು. ಪ್ರಸ್ತುತ ನಾನು ಅರಸೀಕೆರೆಗೆ ವರ್ಗವಾಗಿದ್ದರೂ ಜಿಲ್ಲಾಧ್ಯಕ್ಷನಾಗಿ ಮುಂದುವರೆಯಲು ಅವಕಾಶವಿದೆ. ಹೊರ ಜಿಲ್ಲೆಗೆ ವರ್ಗವಾದರೆ ಮುಂದುವರೆಯುವಂತಿಲ್ಲ. ನನ್ನ ಅಧಿಕಾರದ ಅವಧಿ ಇನ್ನು ಕೇವಲ ನಾಲ್ಕೈದು ತಿಂಗಳು ಮಾತ್ರವಿದ್ದು, ಈ ಸಮಯದಲ್ಲಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ರಾಜ್ಯ ಸಂಘಕ್ಕೆ ವರದಿ ನೀಡಿ, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಲಾಗುವು ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ದಿನೇಶ್,ತಾಲ್ಲೂಕು ಅಧ್ಯಕ್ಷರಾದ ಕೃಷ್ಣಮೂರ್ತಿ, ಶಿವಶಂಕರ್, ಕುಮಾರಸ್ವಾಮಿ, ಲಕ್ಷಿ??ೀಕಾಂತ್, ಮಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net