ಫೆ. 24ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ ಸಕಲ ಸಿದ್ಧತೆ:ಡಿಸಿ

ಫೆ. 24ರಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನ ಸಕಲ ಸಿದ್ಧತೆ:ಡಿಸಿ
Published on

ಹಾಸನ: ಅರಸೀಕೆರೆ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಫೆ. 24ರಂದು ಅರಸೀಕೆರೆ ತಾಲೂಕಿನ ಬಾಣಾವರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ವಿವಿಧ ಇಲಾಖೆಗಳ ಸಚಿವರು ಆಗಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.
ಬಾಣಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಧ್ಯಾಹ್ನ 12 ರಿಂದ 2.35ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, 138 ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಹಾಗು 14 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ವಿವಿಧ ಕಟ್ಟಡಗಳನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ತಿಳಿಸಿದರು.
ಶನಿವಾರ ಮಧ್ಯಾಹ್ನ 12 ಗಂಟೆಗೆ ಬಾಣಾವರದ ಎತ್ತಿನಮನೆ ರಸ್ತೆಯ ಹೆಲಿಪ್ಯಾಡ್‌ಗೆ ಸಿಎಂ ಆಗಮಿಸಿ, ಮಧ್ಯಾಹ್ನ 12.20ಕ್ಕೆ ಕೋಟೆ ಬಾಣಾವರದಲ್ಲಿ ಕನಕ ಭವನ ಉದ್ಘಾಟನೆ, 12.40ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಸಭಾಂಗಣಕ್ಕೆ ಆಗಮನ, ಮಧ್ಯಾಹ್ನ 1.10ಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ, ಮಧ್ಯಾಹ್ನ 1.50ಕ್ಕೆ ಮುಖ್ಯಮಂತ್ರಿಗಳ ಭಾಷಣ ಹಾಗು 2.10ಕ್ಕೆ ಬಾಣಾವರದ ಎಲೆಚೌಡಪ್ಪನವರ ಬಡಾವಣೆಯ ಶ್ರೀನಿವಾಸ್ ಅವರ ಮನೆಗೆ ಭೇಟಿ ಆ ಬಳಿಕ ಹೆಲಿಪ್ಯಾಡ್‌ನಿಂದ ಧಾರವಾಡ ಜಿಲ್ಲೆಗೆ ಪ್ರಯಾಣಿಸಲಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ ಜೊತೆಗೆ ಸರ್ಕಾರದ ಐದು ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶ ಸಹ ನಡೆಯಲಿದೆ. ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಯ 25 ರಿಂದ 30 ಸಾವಿರ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕೋಪಯೋಗಿ, ಪಂಚಾಯತ್ ರಾಜ್, ಧಾರ್ಮಿಕ ದತ್ತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು.
ಮಾ. 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ನಗರಕ್ಕೆ ಆಗಮಿಸಲಿದ್ದಾರೆ. ಆ ದಿನ 6816 ಕೋಟಿ ರೂ. ವೆಚ್ಚದ ಕಾಮಗಾರಿ ಉದ್ಘಾಟನೆ ಹಾಗು 5432 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತದಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುಶಃ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಉತ್ತಮ ಸಾಧನೆ ಆಗಿದೆ. ಯುವನಿಧಿ ಯೋಜನೆಯಲ್ಲಿ ಶೇ.68 ಸಾಧನೆಯಾಗಿದ್ದರೆ, ಗೃಹಲಕ್ಷ್ಮೀಯಡಿ ಶೇ.93, ಗೃಹಜ್ಯೋತಿ ಶೇ.99, ಶಕ್ತಿಯೋಜನೆ ಶೇ.100 ಹಾಗು ಅನ್ನಭಾಗ್ಯ ಯೋಜನೆಯಡಿ ಶೇ.98.45 ರಷ್ಟು ಸಾಧನೆಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಡಾ. ಬಿ.ಆರ್.ಪೂರ್ಣಿಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net