

ಹಾಸನ: ನಗರದ ಎಲ್.ವಿ. (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಯ ಅಮೃತ ಮಹೋತ್ಸವ ಸ್ಮತಿ ಮಂದಾರ ಅಲ್ಯುಮಿ ಅಸೋಸಿಯೇಷನ್ ಸಹಯೋಗದೊಂದಿಗೆ ಫೆ.24 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಎಸ್.ಬಿ. ವೀಣಾ ತಿಳಿಸಿದರು.
ಮೈಸೂರು ಸರ್ಕಾರದಿಂದ 1932ರಲ್ಲಿ ಇಂಡಸ್ಟ್ರಿಯಲ್ ಸ್ಕೂಲ್ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ ಈಗ 75 ವರ್ಷ ಪೂರ್ಣಗೋಳಿಸಿದ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉಪಸ್ಥಿತರಿರುವರು. ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಡಳಿತದ ಅಧಿಕಾರಿಗಳು ಭಾಗಿಯಾಗುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದಿನ ಮೈಸೂರು ಸರ್ಕಾರದಲ್ಲಿ ಪ್ರಾರಂಭವಾಗಿ, ತದನಂತರ ಉನ್ನತ ದರ್ಜೆಗೇರಿಸಿ 1948ರಲ್ಲಿ 2 ವರ್ಷದ ಸಿವಿಲ್, ಯಾಂತ್ರಿಕ ಮತ್ತು ವಿದ್ಯುತ್ ಇಂಜಿನಿಯರಿಂಗ್‌ನಲ್ಲಿ ಲೈಸೆನ್ಸ್ ನೀಡುವ ಕೋರ್ಸ್ ಪ್ರಾರಂಭಿಸಲಾಯಿತು. 1958 ರಲ್ಲಿ ಈ ಸಂಸ್ಥೆಯನ್ನು 3 ವರ್ಷಗಳ ಡಿಪ್ಲೊಮಾ ಪದವಿ ನೀಡುವ ಪಾಲಿಟೆಕ್ನಿಕ್ ಆಗಿ ಪರಿವರ್ತಿಸಲಾಯಿತು. ಸಂಸ್ಥೆಗೆ ಅರಸೀಕೆರೆಯ ಕೊಡುಗೈ ದಾನಿಗಳಾದ ಲಕ್ಷಮ್ಮ ಮತ್ತು ವೆಂಕಟಸ್ವಾಮಿಯವರು ಭೂಮಿ ದಾನ ಮಾಡಿದ್ದರಿಂದ ಅವರ ಹೆಸರನ್ನು ಈ ಸಂಸ್ಥೆಗೆ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾಲೇಜಿನಲ್ಲಿ 6 ಕೋರ್ಸ್‌ಗಳಿದ್ದು, 1000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಂಯೋಜನೆಯಡಿ ಸಮುದಾಯ ಪಾಲಿಟೆಕ್ನಿಕ್ ಇದ್ದು, ಅರ್ಹ ನಿರುದ್ಯೋಗಿ ಯುವ ಸಮುದಾಯಕ್ಕೆ ಅಲ್ಪಾವಧಿ, ತರಬೇತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಲಾಗಿದೆ ಎಂದು ಹೇಳಿದರು.
ಅದೇ ರೀತಿ ವಿಶೇಷ ವ್ಯಕ್ತಿಗಳು (ದೈಹಿಕ ದುರ್ಬಲ) ವಿದ್ಯಾರ್ಥಿಗಳಿಗೆ ಧನಸಹಾಯದೊಂದಿಗೆ ಅಲ್ಪಾವಧಿ ತರಬೇತಿ ಮತ್ತು ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಜೊತೆಗೆ ಎನ್‌ಸಿಸಿ, ಎನ್‌ಎಸ್‌ಎಸ್ ಘಟಕ ಮತ್ತು ರೆಡ್ ಕ್ರಾಸ್ ಘಟಕ ಕಾರ್ಯನಿರ್ವಹಿಸುತ್ತಿವೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ರಿಜಿಸ್ಟ್ರಾರ್ ಎಸ್.ವಿಜಯಶ್ರೀ, ಕಾಲೇಜಿನ ಮೇಜರ್ ವೆಂಕಟೇಶ್, ಡಿ .ಕುಮಾರ್, ಲೋಕೇಶ್, ಡಾ. ಬಿ.ವಿ.ಮಧು, ಎಚ್.ಪಿ. ಚಂದನ್ ಇದ್ದರು.