ಚನ್ನರಾಯಪಟ್ಟಣ: ಪಟ್ಟಣದ ಕೆರೆ ಬೀದಿಯಲ್ಲಿ ನಿರ್ಮಿಸಿರುವ ಒಕ್ಕಲಿಗರ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಫೆ.22 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಯುವಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜು ಹೇಳಿದರು.
ಜನಪ್ರತಿನಿಧಿಗಳ ಅನುದಾನ ಹಾಗೂ ಒಕ್ಕಲಿಗ ಕುಲಬಾಂಧವರ ಸಹಕಾರದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಹಳೆಯ ಶ್ರೀ ರಾಮ ಮಂದಿರವಿದ್ದ ಸ್ಥಳದಲ್ಲಿ ನೂತನವಾಗಿ ಒಕ್ಕಲಿಗರ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನದನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಅವರು ದಿವ್ಯ ಸಾನಿಧ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕ್ಷೇತ್ರದ ಚಂದ್ರಶೇಖರ ಗುರೂಜಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದ ವಿವರ: ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವು ಎರಡು ದಿನಗಳ ಕಾಲ ನಡೆಯಲಿದ್ದು ಫೆ.29 ರಂದು ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಮತ್ತು ಮಂಗಳವಾದ್ಯದೊಂದಿಗೆ ಶ್ರೀ ಗಣಪತಿ ಪೂಜೆ, ಪುಣ್ಯಾದಿ, ಪಂಚಗವ್ಯ, ಗಂಗೆ ತರುವುದು, ಯಾಗ ಶಾಲೆ ಪ್ರವೇಶ, ಕಳಶ ಸ್ಥಾಪನೆ, ಮಂಡಲರಾಧನೆ, ಮಧ್ಯಾಹ್ನ 2 ಗಂಟೆಗೆ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀರಾಮ ದೇವರು, ಮುತ್ತುತ್ತರಾಯಪ್ಪ, ಗ್ರಾಮದೇವತೆ ವಳಗೇರಮ್ಮ ಮಾರಮ್ಮ, ಕಾಡಾಂಜನೇಯ ಸ್ವಾಮಿ ದೇವರುಗಳ ಮೆರವಣಿಗೆ. ಸಂಜೆ 5 ಗಂಟೆಗೆ ರಕ್ಷೋಘ್ನ ಹೋಮ, ವಾಸ್ತುಹೋಮ, ಆಗಮಿಕ ಉತ್ಸವ ಮೂರ್ತಿಗಳಿಗೆ ಸ್ವಾಗತ ಮತ್ತು ಆಯಾ ದೇವರುಗಳ ಪೀಠ ಸ್ಥಾಪನೆ, ಬಲಿ ಪ್ರದಾನ, ದಿಗ್ಬಲಿ, ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ. ಫೆಬ್ರವರಿ 22ರಂದು ಬೆಳಗ್ಗೆ 10:30ಕ್ಕೆ ಪೂರ್ಣಾಹುತಿ, ಸಾಮೂಹಿಕ ಪ್ರಾರ್ಥನೆ, ತೀರ್ಥ ಪ್ರಸಾದ ವಿನಿಯೋಗ ನಂತರ ಸಭಾ ಕಾರ್ಯಕ್ರಮ ನಂತರ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು.
ನೂತನವಾಗಿ ನಿರ್ಮಣವಾಗಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ 1500 ಜನ ಮೀರದಂತೆ ಎಲ್ಲಾ ರೀತಿಯ ಸಸ್ಯಹಾರಿ ಶುಭಕಾರ್ಯಗಳನ್ನು ಮಾಡಲು ಸಿಸಿಟಿವಿ ಒಳಗೊಂಡಂತೆ ಎಲ್ಲಾ ಸಕಲ ಸೌಕರ್ಯಗಳನ್ನು ಮಾಡಿದ್ದು ಪಟ್ಟಣದ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಸಮುದಾಯ ಭವನದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಯುವಕರ ಸಂಘದ ಉಪಾಧ್ಯಕ್ಷ ಸಿ.ಕೆ.ಕೃಷ್ಣ, ಕಾರ್ಯದರ್ಶಿ ಸಿ.ಆರ್.ಮಂಜುನಾಥ್, ಸಹಕಾರ್ಯದರ್ಶಿ ಸಿ.ಪಿ.ಜಯರಾಮ್, ಖಜಾಂಚಿ ನಂಜಪ್ಪ(ದೊರೆಸ್ವಾಮಿ) ಇದ್ದರು.