ಫೆ.15 ರಿಂದ ಗೊರೂರು ಯೋಗಾನರಸಿಂಹಸ್ವಾಮಿ ಜಾತ್ರಾ ಮಹೋತ್ಸವ

ಫೆ.15 ರಿಂದ ಗೊರೂರು ಯೋಗಾನರಸಿಂಹಸ್ವಾಮಿ ಜಾತ್ರಾ ಮಹೋತ್ಸವ
Published on

ಹಾಸನ: ತಾಲೂಕಿನ ಗೊರೂರು ಯೋಗಾನರಸಿಂಹಸ್ವಾಮಿ ಜಾತ್ರಾ ಮಹೋತ್ಸವು ಫೆ.15 ರಿಂದ 17ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಗೊರೂರು ಪೌರಾಣಿಕ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಜಗದೀಶ್ ರಾಮಘಟ್ಟ ಅವರು ತಿಳಿಸಿದರು.
ನಾಟಕೋತ್ಸವವನ್ನು ಸಂಸದ ಪ್ರಜ್ವಲ್ ರೇವಣ್ಣ ಅವರು ಉದ್ಘಾಟಿಸಲಿದ್ದು, ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಹೇಮಾವತಿ ಜಲಾಶಯದ ಮುಖ್ಯ ಇಂಜಿನೀಯರ್ ಮಂಜುನಾಥ್ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಹೊಳೆನರಸಿಪುರ ತಾಲ್ಲೂಕಿನ ಶ್ರೀ ಮಾರುತಿ ಡ್ರಾಮಸೀನ್ಸ್ ರಂಗಸಜ್ಜಿಕೆಯಲ್ಲಿ ನಾಟಕೋತ್ಸವ ಜರುಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.15ರಂದು ಸಂಜೆ4 ಗಂಟೆಗೆ ಶ್ರೀ ಸಂಗಮೇಶ್ವರ ಜಾನಪದ ರಂಗಭೂಮಿ ಕಲಾವಿದರಿಂದ ’ಸಂಪೂರ್ಣರಾಮಾಯಣ’, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಡಾ. ರಾಜಕುಮಾರ್ ಕಲಾ ಸಂಘದಿಂದ ಫೆ.16ರಂದು ಬೆಳಗ್ಗೆ 11 ಗಂಟೆಗೆ ’ಕುರುಕ್ಷೇತ್ರ’, ಗೊರೂರಿನ ಶ್ರೀ ಯೋಗನರಸಿಂಹ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಫೆ.16ರಂದು ಸಂಜೆ 7 ಗಂಟೆಗೆ ಪ್ರಚಂಡ ರಾವಣ, ಹಾಸನದ ಜೈ ಭೀಮ್ ಕಲಾ ಸಂಘದಿಂದ ಫೆ.17ರಂದು ಮಧ್ಯಾಹ್ನ 12 ಗಂಟೆಗೆ ಕುರುಕ್ಷೇತ್ರ ರಾತ್ರಿ 8 ಗಂಟೆಗೆ ಗೊರೂರಿನ ಶ್ರೀ ಯೋಗ ನರಸಿಂಹ ಕೃಪಾಪೋಷಿತ ನಾಟಕಮಂಡಳಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಇಂಜಿನಿಯರ್ ಮಂಜುನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಇತರರು ಪಾಲ್ಗೊಳ್ಳುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ನಿಂಗರಾಜ್ ಅಪ್ಪಾಜಿಗೌಡ, ಹರ್ಷವರ್ಧನ್, ಬಂಗಾರಿಗೌಡ, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net