ಮಂಡ್ಯ: ಪ್ರಸಕ್ತ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಫೆ.11ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಜ.16ರಿಂದಲೇ ಪೂರ್ವಭಾವಿ ಬೈಠಕ್‌ಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ತಿಳಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿ ವರ್ಷ ಸುಮಾರು 4 ಬಾರಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದೆ. 2022ರ ನ.12ರಂದು ಕಡೆಯ ಲೋಕ-ಅದಾಲತ್ ನಡೆದಿತ್ತು. ಆಸ್ತಿ ವಿವಾದ ಪ್ರಕರಣಗಳನ್ನೊಳಗೊಂಡಂತೆ ಸಿವಿಲ್ ವ್ಯಾಜ್ಯಗಳು, ಮೋಟಾರು ವಾಹನಗಳ ಪ್ರಕರಣ, ಎಂಎಂಆರ್‌ಡಿ ಪ್ರಕರಣ, ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣ ಮತ್ತು ಚೆಕ್‌ಬೌನ್ಸ್ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಜತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ(ಪಿಎಲ್‌ಸಿ) ಬ್ಯಾಂಕ್ ವಸೂಲಾತಿ ಪ್ರಕರಣ, ವಿದ್ಯುತ್ ಮತ್ತು ನೀರಿನ ಬಿಲ್, ಕಾರ್ಮಿಕ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಪ್ರಾಧಿಕಾರದಿಂದ ಪೂರ್ವಭಾವಿ ಬೈಠಕ್‌ಗಳನ್ನು ನಡೆಸಿ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಇಂತಹ ಪ್ರಕರಣಗಳಿಗೆ ನ್ಯಾಯಾಲಯ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಉಭಯ ಪಕ್ಷಗಾರರು ವಕೀಲರ ಮೂಲಕ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ, ಪ್ರಕರಣಗಳನ್ನು ರಾಜಿ ಮಾಡಿಸಿಕೊಳ್ಳಬಹುದು ಎಂದು ವಿವರಿಸಿದರು.
ಕಾನೂನು ನೆರವು ಕಚೇರಿ ಪ್ರಾರಂಭ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಕಾನೂನು ನೆರವು ಅಭಿರಕ್ಷಕರ ಕಚೇರಿಯನ್ನು ಆರಂಭಿಸಲಾಗಿದೆ. ಜ.13ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಾಧಿಕಾರದ ಅಧ್ಯಕ್ಷರು ಸಾಂಕೇತಿಕವಾಗಿ ಉದ್ಘಾಟಿಸಿದ್ದಾರೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ತಿಳಿಸಿದರು.
1 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವವರು, ಮಹಿಳೆಯರು, ಮಕ್ಕಳು, ಎಸ್ಸಿ ಮತ್ತು ಎಸ್ಟಿ ವರ್ಗದವರು, ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳು ಕ್ರಿಮಿನಲ್ ಪ್ರಕರಣಗಳ ಇತ್ಯರ್ಥಕ್ಕಾಗಿ ಅಭಿರಕ್ಷಕರ ಕಚೇರಿ ಮೂಲಕ ಉಚಿತವಾಗಿ ಕಾನೂನು ಸೇವೆ ಪಡೆಯಬಹುದು. ಇದಕ್ಕಾಗಿ ನಾಲ್ವರು ವಕೀಲರನ್ನು ಪೂರ್ಣಾವಧಿ ಕಾನೂನು ಸಲಹೆಗಾರರಾಗಿ ನೇಮಿಸಿಕೊಳ್ಳಲಾಗಿದೆ. ಮುಖ್ಯ ಕಾನೂನು ನೆರವು ರಕ್ಷಣಾ ಸಲಹೆಗಾರರಾಗಿ ಬಿ.ಕೆ.ಗಣಪತಿ, ಉಪ ಕಾನೂನು ನೆರವು ರಕ್ಷಣಾ ಸಲಹೆಗಾರರಾಗಿ ಶಿವನಂಜಯ್ಯ, ಸಹಾಯಕ ಕಾನೂನು ನೆರವು ರಕ್ಷಣಾ ಸಲಹೆಗಾರರಾಗಿ ಎಸ್.ಎಂ.ಭಾರತಿ ಮತ್ತು ಭರತ್ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.