

ಚಿಕ್ಕಮಗಳೂರು: ನಗರಸಭೆ ಆವರಣದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಫುಡ್ಕೋರ್ಟ್ ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. ರಾಜ್ಯದಲ್ಲೇ ಮಾದರಿಯಾದ ತಿನಿಸು ಅಂಗಳ ನಿರ್ವಿುಸಿ ಬೀದಿಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಗರದ ಬೀದಿಬದಿ ವ್ಯಾಪಾರಿಗಳ ಬೆಂಬಲ ಉಪಘಟಕದಡಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಸಿ.ಟಿ.ರವಿ ಸಹಕಾರದಿಂದ ಫುಡ್ಕೋರ್ಟ್ ನಿರ್ವಣಕ್ಕೆ ಕಾರ್ಯಾದೇಶ ನೀಡಿದ್ದು, ಇನ್ನೊಂದು ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಹನುಮಂತಪ್ಪ ವೃತ್ತದ ಸಮೀಪ ಇರುವ ಸ್ಥಳದಲ್ಲಿ ಹೂವಿನ ವ್ಯಾಪಾರಿಗಳಿಗೆ ಬಿಸಿಲು, ಮಳೆಯಿಂದ ತೊಂದರೆಯಾಗದಂತೆ ಶೆಡ್ ನಿರ್ವಿುಸಲು ಉದ್ದೇಶಿಸಿದ್ದು, ಆ.15ರಂದು ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಶಕ್ತಿ ತುಂಬುವ ಜತೆಗೆ ಅವರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಡವರು ಶೇ.10, 20ರಷ್ಟು ಬಡ್ಡಿಗೆ ಸಾಲ ಪಡೆದು ತೀರಿಸಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರಿಂದ ಬೀದಿಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ದೌರ್ಜನ್ಯ ತಪ್ಪಿಸುವ ಜತೆಗೆ ಅವರಿಗೆ ಆರ್ಥಿಕ ನೆರವು ನೀಡಿ, ಜೀವನ ಸುಗಮವಾಗಿಸಲು ಬ್ಯಾಂಕ್ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್ನಿಂದ ಮೊದಲು 10 ಸಾವಿರ ರೂ. ಸಾಲ ಕೊಡಿಸಿ ತೀರಿಸಿದ ನಂತರ 20 ಸಾವಿರ ಕೊಡಲಾಗುತ್ತದೆ. ಹೀಗೆ ಸಕಾಲಕ್ಕೆ ಮರುಪಾವತಿಸಿದವರಿಗೆ 10 ಲಕ್ಷ ರೂ.ವರೆಗೆ ನೀಡಿ ಅವರ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಲಾಗುತ್ತಿದೆ ಎಂದು ಹೇಳಿದರು.</p>