ಫುಡ್ ಪಾರ್ಕ್ ನಿರ್ಮಾಣ: ಬಿಜೆಪಿ ಕೂಸಿಗೆ ಕಾಂಗ್ರೆಸ್ ಅಪ್ಪ ಆಗಲು ಹೊರಟಿದೆ.... ವಿಜುಗೌಡ ಪಾಟೀಲ ವ್ಯಂಗ್ಯ!

20210316_124916
Published on

ವಿಜಯಪುರ: ಬಿಜೆಪಿ ಹುಟ್ಟಿಸಿದ ಕೂಸಿಗೆ ಕಾಂಗ್ರೆಸ್ ತಂದೆಯಾಗಲು ಹೊರಟಿದೆ ಎಂದು ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ವ್ಯಂಗ್ಯವಾಡಿದರು.

ಫುಡ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫುಡ್ ಪಾರ್ಕ್ ನಿರ್ಮಾಣಕ್ಕೆ ಈ ಹಿಂದೆಯೇ ಜಿಲ್ಲೆಯ ರೈತ ಮುಖಂಡರೊಂದಿಗೆ ಚರ್ಚೆ ಮಾಡಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮನವಿ ಮಾಡಿದ್ದೆ. ಅವರೂ ಸಕಾರಾತ್ಮಕ ವಾಗಿ ಸ್ಪಂದಿಸಿದ್ದರು. ಬಳಿಕ ಕೃಷಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು‌. ಆಗ ನನ್ನ ಮನೆಗೆ ಬಂದು ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ವಿಶೇಷವಾಗಿ ನನ್ನ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಯೋಜನೆಯಾದ್ದರಿಂದ ನಾನೂ ವಿಶೇಷವಾಗಿ ಕಾಳಜಿ ವಹಿಸಿದ್ದೆ. ಆದರೆ ಕೆಲವರು ಅದನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಇದು ಯಾರದೋ‌ ಕೂಸಿಗೆ ಯಾರೋ ಹೆಸರಿಟ್ಟಿಂತೆ ಎಂದು ಲೇವಡಿ ಮಾಡಿದರು.

ನಾವು ಹುಟ್ಟಿಸಿದ ಕೂಸಿಗೆ ನಾವೇ ಹೆಸರಿಡಬೇಕು. ನಾಮಕರಣಕ್ಕೆ ನಾವೇ ಕರೆಯುತ್ತೇವೆ. ಬೇಕಾದರೆ ಬರಲಿ. ಅದನ್ನು ಬಿಟ್ಟು ನಮ್ಮ ಕೂಸಿಗೆ ಕಾಂಗ್ರೆಸ್ ನವರು ಹೆಸರಿಡಲು ಓಡಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ಪಕ್ಷಾಂತರ ವಿಷಯ: ಬಬಲೇಶ್ವರ ಕ್ಷೇತ್ರದಲ್ಲಿ ಪಕ್ಷಾಂತರ ಕಾರ್ಯ ನಡೆದಿದ್ದು ಸುಮಾರು 200 ಕುಟುಂಬಗಳು ಕಾಂಗ್ರೆಸ್ ಸೇರಿದ್ದಾರೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಅದರಲ್ಲಿ ಕೆಲವರು ಬಿಜೆಪಿಯವರೇ ಅಲ್ಲ..ಕಾಂಗ್ರೆಸ್ ನಲ್ಲೇ ಇರುವವರಿಗೆ ಶಾಲು ಹಾಕಿ ಕಾಂಗ್ರೆಸ್ ಸೇರ್ಪಡೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬೆಳಗ್ಗೆ, ಮಧ್ಯಾಹ್ನ, ಸಂಜೆ ಒಂದೊಂದು ಕಡೆ ಇರುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು. ಒಂದಂತೂ ನಿಜ ಮೂಲ ಬಿಜೆಪಿ ಕಾರ್ಯ ಕರ್ತರು ಯಾರೂ ಪಕ್ಷ ಬಿಡಲ್ಲ ಎಂದರು‌. ಮುಖಂಡ ರಾಜುಗೌಡ ಪಾಟೀಲ, ವಿಠಲ ಕಿರಸೂರ, ವಿಜಯಕುಮಾರ ಜೋಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net