ದಾವಣಗೆರೆ: ಬನ್ನಿ ಸರ್, ಮೇಡಂ ಫುಡ್ ಟೇಸ್ಟ್ ಮಾಡಿ.. ಚಾಯ್, ಚಾಯ್.. ಬೀಡಾ ಬೇಕಾ ಸಾರ್ ಬೀಡಾ..
ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಕೇಳಿಬಂದ ಕೂಗುಗಳಿವು. ಜೋಳದ ರೊಟ್ಟಿ, ಮೆಣಸಿನಕಾಯಿ ಚಟ್ನಿ, ಮಂಡಕ್ಕಿ-ಮೆಣಸಿನಕಾಯಿ, ಫ್ರೂಟ್ ಸಲಾಡ್, ಪಾನಿಪೂರಿಯಿಂದ ಹಿಡಿದು ಗಿರಮಿಟ್ಟು,ಎಗ್‌ರೈಸ್ ವಿವಿಧ ಬಗೆಯ ಮಸಾಲ ತಿನಿಸುಗಳು ಬಿಕರಿಯಾದವು.
ವಿದ್ಯಾರ್ಥಿಗಳು, ಶಿಕ್ಷಕರು ಮೇಳದಲ್ಲಿನ 15 ಮಳಿಗೆಗಳನ್ನು ವೀಕ್ಷಿಸಿ ತಿನಿಸುಗಳನ್ನು ಖರೀದಿಸಿ ಸವಿದರೆ, ಪ್ರತಿ ಮಳಿಗೆಗಳನ್ನು ನಿರ್ವಹಿಸಿದವರು ಹೆಚ್ಚು ವ್ಯಾಪಾರ ನಡೆದ ಬಗ್ಗೆ ಬೀಗಿದರು. ಹಾಕಿದ ಬಂಡವಾಳ ಕೈ ಸೇರುವ ಜತೆಗೆ ಎರಡು ಪಟ್ಟು ಲಾಭ ಬಂದಿದ್ದರ ಬಗ್ಗೆ ಖುಷಿ ಪಟ್ಟರು. ಬಾಪೂಜಿ ಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಮೇಳ ಉದ್ಘಾಟಿಸಿ ವಿದ್ಯಾರ್ಥಿಗಳ ಖಾದ್ಯ ರುಚಿಸಿದರು.
ಗ್ರಾಹಕರಿಗೆ ಬೇಕಾದ ಶುಚಿ-ರುಚಿ, ಖಾದ್ಯವನ್ನು ನೀಡುವಲ್ಲಿ ಹೊಸ ವಿನ್ಯಾಸ, ಸಾಂಪ್ರದಾಯಿಕ ಅಡುಗೆ ಕ್ರಮ ಹಾಗೂ ವ್ಯವಹಾರ ಜಾಣ್ಮೆಯನ್ನು ಮೇಳದಿಂದ ಕಲಿತೆವು ಎಂದು ಎಂ.ಕಾಂ. ವಿದ್ಯಾರ್ಥಿನಿ. ಎಂ. ಐಶ್ವರ್ಯಾ ಹೇಳಿದರು.
ಮೇಳದಿಂದ ಆರ್ಥಿಕ ವ್ಯವಹಾರ ಕುಶಲತೆ ಜತೆಗೆ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು ಮೂಡಿಸಿದೆ. ಆರ್ಥಿಕ ನಿರ್ವಹಣೆ ಕುರಿತಂತೆ ತಿಳಿಯಲು ಸಾಧ್ಯವಾಯಿತು ಎಂದು ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಎನ್. ಸಿಂಧು, ಬಿಕಾಂ ವಿದ್ಯಾರ್ಥಿ ಬಿ.ಎಂ. ದಿನೇಶ್ ಹೇಳಿದರು.
ಪ್ರಾಚಾರ್ಯ ಪ್ರೊ.ಕೆ.ಎಸ್.ಬಸವರಾಜಪ್ಪ, ಬೊಮ್ಮಣ್ಣ, ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಜೆ.ಕೆ. ಮಲ್ಲಿಕಾರ್ಜುನಪ್ಪ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಜೆ. ಅನಿತಾಕುಮಾರಿ, ಸ್ನಾತಕೋತ್ತರ ವಿಭಾಗದ ಲೋಕೇಶ್‌ರೆಡ್ಡಿ, ಕನ್ನಡ ವಿಭಾಗದ ಡಾ. ಎಚ್.ಆರ್.ತಿಪ್ಪೇಸ್ವಾಮಿ, ಗ್ರಂಥಾಲಯ ವಿಭಾಗದ ಡಾ. ಚಮನ್‌ಸಾಬ್, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ರಶ್ಮಿ ಇತರರಿದ್ದರು.