ಫುಟ್​ಪಾತ್​ನಲ್ಲಿ ವಾಸವಿದ್ದ ವೃದ್ಧೆಗೆ ನೆಲೆ

24 smg 6
Published on

ಜಯನಗರ, ಪೊಲೀಸರು, ಕರೊನಾ ವೈರಸ್, ಫುಟ್​ಪಾತ್, ನಿಯಮ ಪಾಲನೆ, ಎಎಸ್​ಐ, ಸಂಚಾರ ಪೊಲೀಸ್ ಟವರ್, ಉಷಾ ನರ್ಸಿಂಗ್ ಹೋಮ್ ಹಿಂದಿ ಭಾಷೆ, ಉತ್ತರ ಭಾರತ, ಮಾಹಿತಿ, ವಸತಿ ಕೇಂದ್ರ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ, ಮಾನವೀಯತೆ, Jayanagar, Police, Corona Virus, Footpath, Law Enforcement, ASI, Traffic Police Tower, Usha Nursing Home Hindi Language, North India, Information, Housing Center, District Disabled Welfare Officer, Humanitarian

ಶಿವಮೊಗ್ಗ: ಕರೊನಾ ವೈರಸ್​ನಿಂದ ಮನೆಯವರು, ಸಂಬಂಧಿಕರು, ಸ್ನೇಹಿತರನ್ನೇ ಅನುಮಾನದಿಂದ ನೋಡುವಂತಾಗಿದೆ. ಆದರೆ ಕೆಲವು ದಿನಗಳಿಂದ ಹೊರ ರಾಜ್ಯದಿಂದ ಬಂದು ಸವಳಂಗ ರಸ್ತೆಯ ಫುಟ್​ಪಾತ್​ನಲ್ಲಿ ಕರೊನಾ ನಿಯಮ ಪಾಲಿಸದೆ ವಾಸಿಸುತ್ತಿದ್ದ ವೃದ್ಧೆಯೊಬ್ಬಳಿಗೆ ಜಯನಗರ ಪೊಲೀಸರು ನೆಲೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಜಯನಗರ ಠಾಣೆಯ ಎಎಸ್​ಐ ಪುಟ್ಟಯ್ಯ ಹನಗೋಡಿಮಠ ಅವರು ನಗರದಲ್ಲಿ ರೌಂಡ್ಸ್ ಮಾಡುವಾಗ ಉಷಾ ನರ್ಸಿಂಗ್ ಹೋಮ್ ಎದುರು ಸಂಚಾರ ಪೊಲೀಸ್ ಟವರ್ ಬಳಿ ಅಂಗಡಿ ಮುಂದೆ ಅಂದಾಜು 60 ವರ್ಷದ ಮಹಿಳೆಯೊಬ್ಬಳು ಕಳೆದ ಕೆಲವು ದಿನಗಳಿಂದ ವಾಸಿಸುತ್ತಿರುವುದನ್ನು ಗಮನಿಸಿದ್ದರು. ಗುರುವಾರ ಆಕೆಯನ್ನು ವಿಚಾರಿಸಿದಾಗ ಕನ್ನಡ ಬಾರದ ಆಕೆ ಹಿಂದಿಯಲ್ಲಿ ತನ್ನ ಹೆಸರು ಮೀನಾಕ್ಷಿ, 62 ವರ್ಷ, ಉತ್ತರ ಭಾರತದವಳು ಎಂದು ಮಾಹಿತಿ ನೀಡಿದ್ದಳು. ಅಲ್ಲದೆ ತಾನು ನಿರ್ಗತಿಕಳೆಂದು ಹೇಳಿಕೊಂಡಿದ್ದಳು.

ಶಿವಮೊಗ್ಗದಲ್ಲೂ ಕರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವೃದ್ಧೆ ಮಾಸ್ಕ್ ಧರಿಸದೆ ತಿರುಗಾಡಿಕೊಂಡಿದ್ದಳು. ಇದು ಸರಿಯಲ್ಲ ಎಂದು ಎಎಸ್​ಐ ಈ ವಿಷಯವನ್ನು ಪ್ರಭಾರ ಸಬ್ ಇನ್ಸ್​ಪೆಕ್ಟರ್ ರಹತ್ ಅಲಿ ಗಮನಕ್ಕೆ ತಂದಿದ್ದರು.

ಕೂಡಲೇ ಅವರು ವೃದ್ಧೆಯನ್ನು ವಶಕ್ಕೆ ಪಡೆದು ವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ಶಿಲ್ಪಾ ದೊಡ್ಡಮನಿ ಭದ್ರಾವತಿ ತಾಲೂಕಿನ ಆಗರದಹಳ್ಳಿಯಲ್ಲಿರುವ ಇಲಾಖೆ ವಸತಿ ನಿಲಯದಲ್ಲಿ ವಸತಿ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ.

ಪೊಲೀಸರ ಈ ಕಾರ್ಯಕ್ಕೆ ಪ್ರತಿ ನಿತ್ಯ ವೃದ್ಧೆಗೆ ಊಟ, ತಿಂಡಿ ಒದಗಿಸುತ್ತಿದ್ದ ಸ್ಥಳಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net