ಫುಟ್​ಪಾತ್ ಅತಿಕ್ರಮಿಸಿದ ಡಬ್ಬಾ ಅಂಗಡಿ ತೆರವು

h10-Matha 2
Published on

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಫುಟ್​ಪಾತ್ ಅತಿಕ್ರಮಿಸಿಕೊಂಡಿದ್ದ 12 ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ತೆರವುಗೊಳಿಸಿದ್ದಾರೆ. ಚಹಾ ಅಂಗಡಿ, ಆಟಿಗೆ ಸಾಮಗ್ರಿಗಳ ಅಂಗಡಿ ಸೇರಿ ವಿವಿಧ ಡಬ್ಬಾ ಅಂಗಡಿಗಳು ಶ್ರೀಮಠದ ಎದುರಿನ ವಿಶಾಲ ರಸ್ತೆಯ ಇಕ್ಕೆಲದ ಫುಟ್​ಪಾತ್ ಅನ್ನು ಅತಿಕ್ರಮಿಸಿಕೊಂಡಿದ್ದವು. ಲಾಕ್​ಡೌನ್​ಗಿಂತ ಮುಂಚೆಯೇ ಈ ಅಂಗಡಿಗಳನ್ನು ತೆರವುಗೊಳಿಸುವಂತೆ ಅಲ್ಲಿನ ವ್ಯಾಪಾರಸ್ಥರಿಗೆ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದರು. ಆದರೂ ವ್ಯಾಪಾರಸ್ಥರು ಸ್ಪಂದಿಸಿ, ಸಹಕರಿಸಲು ಮುಂದಾಗಿರಲಿಲ್ಲ. ಲಾಕ್​ಡೌನ್ ವಿನಾಯಿತಿ ನಂತರ ಸೋಮವಾರದಿಂದ ದೇವಸ್ಥಾನಗಳು ಬಾಗಿಲು ತೆರೆದಿದ್ದು, ಮತ್ತೊಮ್ಮೆ ಇಲ್ಲಿನ ವ್ಯಾಪಾರಸ್ಥರಿಗೆ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದರು. ಆದರೂ, ಏನೂ ಪ್ರಯೋಜನವಾಗದ್ದರಿಂದ ಬುಧವಾರ ಮಧ್ಯಾಹ್ನ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರ ಭದ್ರತೆಯೊಂದಿಗೆ ಪಾಲಿಕೆ ಅಧಿಕಾರಿಗಳು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದರು. ಪಾಲಿಕೆ ವಲಯ ಕಚೇರಿ ನಂ. 7ರ ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net