

ಹುಬ್ಬಳ್ಳಿ: ನಗರದ ಶಿರೂರ ಪಾರ್ಕ್ ಬಳಿಯ ಸಿದ್ದೇಶ್ವರ ಪಾರ್ಕ್ನಲ್ಲಿ ಟೆಂಡರ್ ಶ್ಯೂರ್ ರಸ್ತೆಯ ಫುಟ್ಪಾತ್ ಅತಿಕ್ರಮಣವನ್ನು ಸೋಮವಾರ ಬೆಳಗ್ಗೆ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಈ ಕುರಿತು ವಿಜಯವಾಣಿ ಜು. 10ರಂದು ವರದಿ ಪ್ರಕಟಿಸಿತ್ತು. ಪಾಲಿಕೆ ವಲಯ ಅಧಿಕಾರಿ ಆನಂದಕುಮಾರ ಝುಳಕಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಫುಟ್ಪಾತ್ ಅತಿಕ್ರಮಿಸಿ ಹಾಕಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್ ಅನ್ನು ಜೆಸಿಬಿ ಬಳಸಿ ಪುಡಿಗಟ್ಟಲಾಯಿತು. ಸುಮಾರು 2 ಮೀಟರ್ ಅಗಲ ಹಾಗೂ 18 ಮೀಟರ್ ಉದ್ದಕ್ಕೆ ಹಾಕಲಾಗಿದ್ದ ಕಾಂಕ್ರೀಟ್ ನಿರ್ವಣವನ್ನು ಧ್ವಂಸಗೊಳಿಸಿದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು.
ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದಿಂದ ಈ ಅತಿಕ್ರಮಣ ನಡೆದಿತ್ತು. ಫುಟ್ಪಾತ್ಗೆ ಹೊಂದಿಕೊಂಡೇ ಕಟ್ಟಡದ ಗೋಡೆ ಎದ್ದು ನಿಂತಿವೆ. ಆದರೆ, ಲೋಪ ಇದಲ್ಲ. ಕಟ್ಟಡದ ಕೆಳ ಮೆಟ್ಟಿಲು ಎತ್ತರವಾಗದಂತೆ ಮಾಡಿರುವ ನಿರ್ಮಾಣ ಫುಟ್ಪಾತ್ ಅನ್ನು ಅತಿಕ್ರಮಿಸಿತ್ತು. ರಸ್ತೆ ಬದಿ ಫುಟ್ಪಾತ್ ಜತೆ ಸೈಕಲ್ ಪಾತ್ ನಿರ್ಮಾಣ ಮಾಡಿರುವುದು ಟೆಂಡರ್ ಶ್ಯೂರ್ ರಸ್ತೆಯ ವಿಶೇಷತೆ. ಆದರೆ, ಇಲ್ಲಿ ಸೈಕಲ್ ಪಾತ್ ಕಾಣಲು ಸಿಗುತ್ತಿರಲಿಲ್ಲ. ಫುಟಪಾತ್ಅನ್ನೇ ಅರ್ಧದಷ್ಟು ಅತಿಕ್ರಮಿಸಲಾಗಿತ್ತು. ಪೊಲೀಸ್ ಪಾಟೀಲ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದೆ.
‘ಇಲ್ಲಿ ರಸ್ತೆಗೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಯಾವುದೇ ವ್ಯಾಜ್ಯ ಇಲ್ಲ. ಕೋರ್ಟ್ನಲ್ಲಿ ಇರುವುದು ಬೇರೆ ಪ್ರಕರಣ. ಫುಟ್ಪಾತ್ ಅತಿಕ್ರಮಿಸಿ ಹಾಕಲಾಗಿದ್ದ ಸುಮಾರು ಒಂದೂವರೆ ಮೀಟರ್ ಅಗಲ ಹಾಗೂ 18 ಮೀಟರ್ ಉದ್ದದಷ್ಟು ಕಾಂಕ್ರೀಟ್ ನಿರ್ವಣವನ್ನು ತೆರವುಗೊಳಿಸಿದ್ದೇವೆ. ತೆರವು ಕಾರ್ಯಾಚರಣೆಗೆ ತಗುಲಿರುವ 18-20 ಸಾವಿರ ರೂ. ವೆಚ್ಚವನ್ನು ಅತಿಕ್ರಮಣದಾರರಿಂದ ವಸೂಲಿ ಮಾಡುತ್ತೇವೆ’ ಎಂದು ಪಾಲಿಕೆ ವಲಯ ಅಧಿಕಾರಿ ಆನಂದಕುಮಾರ ಝುಳಕಿ ವಿಜಯವಾಣಿಗೆ ತಿಳಿಸಿದ್ದಾರೆ.