ಫುಟ್‌ಪಾತ್ ಮೇಲೆ ಪೆಟ್ಟಿ ಅಂಗಡಿ ಪ್ರತ್ಯಕ್ಷ!

petti
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿರುವ ಕಬ್ಬಿಣ ಪೆಟ್ಟಿ ಅಂಗಡಿ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ತಿಂಗಳ ಹಿಂದೆ ತಲೆ ಎತ್ತಿದ್ದು, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ, ಇಷ್ಟು ದಿನವಾದರೂ ಈ ಬಗ್ಗೆ ಕ್ರಮಕ್ಕೆ ಮುಂದಾಗದಿರುವ ನಗರಸಭೆ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.
ಆಸ್ಪತ್ರೆ ನಾಮಫಲಕಕ್ಕೆ ಅಡ್ಡಲಾಗಿ ತಲೆ ಎತ್ತಿರುವ ಪೆಟ್ಟಿ ಅಂಗಡಿ ವಿಷಯ ವಿವಾದ ಸೃಷಿಸಿದೆ. ನಗರಸಭೆ ಅಧಿಕಾರಿಗಳ ಜಾಣ ಕುರುಡಿನ ಹಿಂದೆ ಯಾವ ಪ್ರಭಾವಿಗಳಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಅಪರ ಜಿಲ್ಲಾಧಿಕಾರಿ ಈ. ವಿಜಯಾ ರವಿಕುಮಾರ್ ಗಮನಕ್ಕೂ ಈ ವಿಷಯ ತಲುಪಿತ್ತು. ಇದನ್ನು ಪರಿಶೀಲಿಸಿದ್ದ ಅವರು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಇದುವರೆಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಆಯುರ್ವೇದ ಆಸ್ಪತ್ರೆ ಸಿಬ್ಬಂದಿಯೂ ಅಂಗಡಿ ತೆರವಿಗೆ ಮನವಿ ಮಾಡಿದ್ದಾರೆ. ಆದರೂ ನಗರಸಭೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.

ಒತ್ತಡ ಹೇರಿ ಪರವಾನಗಿ ರದ್ದು: ನಗರಸಭೆ ಸದಸ್ಯರೊಬ್ಬರ ಸಂಬಂಧಿ ಹಾಲಿನ ಪಾರ್ಲರ್‌ಗಾಗಿ ಪೆಟ್ಟಿ ಅಂಗಡಿ ಇಟ್ಟಿದ್ದು, ಇದಕ್ಕೆ ನಗರಸಭೆ ಪರವಾನಗಿ ಕೊಟ್ಟಿತ್ತು ಎನ್ನಲಾಗಿದೆ. ವಿವಾದ ಸೃಷ್ಟಿಸುತ್ತಿದ್ದಂತೆ ತೆರವು ಮಾಡುವಂತೆ ಅಧಿಕಾರಿಗಳು ಒತ್ತಡ ಹೇರಿದಾಗ ಪರವಾನಗಿ ರದ್ದು ಮಾಡಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದರೂ ತೆರವುಗೊಳಿಸಲು ಮೀನಮೇಷ ಎಣಿಸುತ್ತಿರುವುದು ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪಾದಚಾರಿ ಮಾರ್ಗದಲ್ಲಿ ಪೆಟ್ಟಿ ಅಂಗಡಿ ಬಂದಿರುವ ವಿಷಯ ಗಮನಕ್ಕೆ ಬಂದಿದ್ದು, ತೆರವುಗೊಳಿಸಲು 3 ದಿನ ಗಡುವು ನೀಡಲಾಗಿದೆ. ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದರೆ ಬಡವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಕಾಲಾವಧಿ ನೀಡಲಾಗಿದೆ. ಪಾದಚಾರಿ ಮಾರ್ಗ ಒತ್ತುವರಿಗೆ ಅವಕಾಶ ನೀಡುವುದಿಲ್ಲ.
ಶಿವಶಂಕರ್ ನಗರಸಭೆ ಆಯುಕ್ತ

ಪೆಟ್ಟಿ ಅಂಗಡಿಯಿಂದ ಆಸ್ಪತ್ರೆ ದ್ವಾರವೂ ಕಾಣದಂತಾಗಿದೆ. ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿದರೆ ದಿಢೀರ್ ಕಾರ್ಯಾಚರಣೆಗೆ ಇಳಿಯುವ ನಗರಸಭೆ ಅಧಿಕಾರಿಗಳು ಪ್ರಭಾವಿಗಳಾಗಿದ್ದರೆ ಜಾಣಕುರುಡು ಪ್ರದರ್ಶಿಸುತ್ತಾರೆ.
ನಾಗರಾಜು ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net