ಫುಟ್ಪಾತ್ ಕಾಮಗಾರಿ ವಿರುದ್ಧ ಪ್ರತಿಭಟನೆ

01M.D.R.1
ಮದ್ದೂರಿನಲ್ಲಿ ಕೆಶಿಪ್‌ನಿಂದ ನಿರ್ಮಾಣ ಮಾಡುತ್ತಿರುವ ಫುಟ್ಪಾತ್ ಅವೈಜ್ಞಾನಿಕವಾಗಿ ಕೂಡಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ, ಅಪ್ಪು ಪಿ.ಗೌಡ, ಉಮೇಶ್, ಗೊರವನಹಳ್ಳಿ ಪ್ರಸನ್ನ, ಜಯರಾಮ, ಸುರೇಶ್, ಶಂಕರ್, ಬೆಟ್ಟಯ್ಯ, ಸಾಗರ್ ಇದ್ದರು.
Published on


ಮದ್ದೂರು: ಪಟ್ಟಣದ ಮಳವಳ್ಳಿ ರಸ್ತೆಯಲ್ಲಿ ಕೆಶಿಪ್ ವತಿಯಿಂದ ನಿರ್ಮಾಣ ಮಾಡುತ್ತಿರುವ ತುಮಕೂರು-ಮಳವಳ್ಳಿ ರಾಷ್ಟ್ರೀಯ ಹೆದ್ದಾರಿ ಫುಟ್ಪಾತ್ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ಆರೋಪಿಸಿ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು.


ಕೆಶಿಪ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪುರಸಭಾ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಮಾತನಾಡಿ, ಕೆಶಿಪ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವೈಜ್ಞಾನಿಕ ರೀತಿಯಲ್ಲಿ ಫುಟ್ಪಾತ್ ಕಾಮಗಾರಿ ಮಾಡದೆ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಒಳಚರಂಡಿಯ ಮ್ಯಾನ್‌ಹೋಲ್ ಸಮರ್ಪಕವಾಗಿ ಮುಚ್ಚದೆ ಕಾಮಗಾರಿ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಒಳಚರಂಡಿ ಸಮಸ್ಯೆ ಉಂಟಾಗಿ ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತದೆ ಎಂದು ಆರೋಪಿಸಿದರು.


2 ವಿದ್ಯುತ್ ಪರಿವರ್ತಕಗಳನ್ನು ಸುರಕ್ಷಿತ ಸ್ಥಳದಲ್ಲಿ ನಿರ್ಮಿಸದೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು, ವಿದ್ಯುತ್ ಪರಿವರ್ತಕದ ತಂತಿಗಳು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಗುವಂತೆ ಇದೆ. ಇದರಿಂದ ಪ್ರಾಣಾಪಾಯವಾಗುವ ಸಾಧ್ಯತೆ ಇದೆ ಎಂದು ಆತಂಕವ್ಯಕ್ತಪಡಿಸಿದರು.


ಫುಟ್ಪಾತ್‌ನಲ್ಲಿ ಇದ್ದ ಬೋರ್‌ವೆಲ್ ಕಿತ್ತು ಹಾಕಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ ಮಾಡಿದ್ದಾರೆ. ಜತೆಗೆ ಫುಟ್ಪಾತ್‌ನಿಂದ ಹೆದ್ದಾರಿಯ ಸಂಪರ್ಕ ರಸ್ತೆಗಳಿಗೂ ಅಡ್ಡಿಯಾಗಿ ವಾಹನ ಸವಾರರಿಗೆ ತೊಂದರೆಯಾಗಿದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರ ಸಮಸ್ಯೆಗಳನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಮುಖಂಡರಾದ ಅಪ್ಪು ಪಿ.ಗೌಡ, ಉಮೇಶ್, ಗೊರವನಹಳ್ಳಿ ಪ್ರಸನ್ನ, ಜಯರಾಮ, ಸುರೇಶ್, ಶಂಕರ್, ಬೆಟ್ಟಯ್ಯ, ಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net